ಗಂಗಾನದಿ ಮಾಲಿನ್ಯ ಮೇಲ್ವಿಚಾರಣೆ ಸಮಿತಿಯ ಅಧಿಕಾರಾವಧಿ ವಿಸ್ತರಣೆ

Update: 2020-12-26 14:09 GMT

ಹೊಸದಿಲ್ಲಿ,ಡಿ.26: ಗಂಗಾನದಿಯ ಮಾಲಿನ್ಯದ ಮೇಲೆ ನಿಗಾ ಇರಿಸಲು ಮತ್ತು ಉತ್ತರ ಪ್ರದೇಶದಲ್ಲಿ ಪರಿಸರ ನಿಯಮಗಳ ಪಾಲನೆಯನ್ನು ನೋಡಿಕೊಳ್ಳಲು ಮೇಲ್ವಿಚಾರಣೆ ಸಮಿತಿಯ ಅಧಿಕಾರಾವಧಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ವು ಆರು ತಿಂಗಳು ವಿಸ್ತರಿಸಿದೆ.

ಉತ್ತರ ಪ್ರದೇಶ ಸರಕಾರವು ಇತರ ಯಾವುದೇ ಪರಿಣಾಮಕಾರಿ ವ್ಯವಸ್ಥೆಯೊಂದನ್ನು ರೂಪಿಸುವವರೆಗೆ ಸಮಿತಿಯನ್ನು ಏಕಾಏಕಿ ಬರ್ಖಾಸ್ತುಗೊಳಿಸುವುದು ಸರಿಯಲ್ಲ. ಆದ್ದರಿಂದ ಸಮಿತಿಯ ಅಧಿಕಾರಾವಧಿಯನ್ನು ಸದ್ಯಕ್ಕೆ ಆರು ತಿಂಗಳ ಕಾಲ ವಿಸ್ತರಿಸಲಾಗಿದೆ. ಉತ್ತರ ಪ್ರದೇಶ ಸರಕಾರವು ಯಾವುದೇ ಸಲಹೆಯನ್ನು ಹೊಂದಿದ್ದರೆ ಅದನ್ನು ನ್ಯಾಯಾಧಿಕರಣದ ಮುಂದಿಡಬಹುದು ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾ.ಆದರ್ಶ ಕುಮಾರ ಗೋಯೆಲ್ ನೇತೃತ್ವದ ಪೀಠವು ಹೇಳಿತು.

‘ಈ ನ್ಯಾಯಾಧಿಕರಣದ ಆದೇಶದಂತೆ ಜಿಲ್ಲಾ ಪರಿಸರ ನಿರ್ವಹಣೆ ಯೋಜನೆಗಳ ಸಿದ್ಧತೆಗೆ ನಿರ್ದೇಶನದ ಪಾಲನೆಯ ಮೇಲೆ ಮತ್ತು ಜಿಲ್ಲಾ ಪರಿಸರ ಸಮಿತಿಗಳಿಂದ ಅವುಗಳ ಅನುಷ್ಠಾನದ ಬಗ್ಗೆಯೂ ನಿಗಾ ವಹಿಸುವಂತೆ ನಾವು ಸಮಿತಿಯನ್ನು ಕೋರುತ್ತಿದ್ದೇವೆ ’ಎಂದು ಪೀಠವು ತಿಳಿಸಿತು.

ಗಂಗಾನದಿ ಮಾಲಿನ್ಯ,ಹಿಂಡಾನ್ ನದಿಯ ಪುನಃಶ್ಚೇತನ ಮತ್ತು ಸಂಬಂಧಿತ ವಿಷಯಗಳು,ಅಲಹಾಬಾದ್‌ನಲ್ಲಿ ಮರಳು ಗಣಿಗಾರಿಕೆ,ಸಿಂಗ್ರೌಲಿಯಲ್ಲಿನ ಉಷ್ಣ ವಿದ್ಯುತ್ ಸ್ಥಾವರಗಳಿಂದ ಮಾಲಿನ್ಯ,ಗೋರಖಪುರದ ರಾಮಗಡ ಸರೋವರ ಮತ್ತು ಅಮಿ ನದಿಯ ಮಾಲಿನ್ಯ,ಘನ ಮತ್ತು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ನಿಯಮಗಳು ಇತ್ಯಾದಿಗಳ ಮೇಲೆ ನಿಗಾ ಇರಿಸಲು ಎನ್‌ಜಿಟಿಯು ಹಿಂದೆ ನೇಮಕಗೊಳಿಸಿದ್ದ ವಿವಿಧ ಸಮಿತಿಗಳ ಬದಲಾಗಿ ಅಸ್ತಿತ್ವಕ್ಕೆ ಬಂದಿರುವ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಎಸ್‌ವಿಎಸ್ ರಾಥೋಡ್ ನೇತೃತ್ವದ ಮೇಲ್ವಿಚಾರಣೆ ಸಮಿತಿಯ ಆರಂಭಿಕ ಅಧಿಕಾರಾವಧಿ ಆರು ತಿಂಗಳುಗಳಾಗಿದ್ದರೂ ಅದನ್ನು ಆಗಾಗ್ಗೆ ವಿಸ್ತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News