ಜಗತ್ತಿನಾದ್ಯಂತ 7.90 ಕೋಟಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ
ಹೊಸದಿಲ್ಲಿ,ಡಿ.26: ಕೋವಿಡ್-19ನ ಆರ್ಭಟಕ್ಕೆ ವಿರಾಮವೇ ಇಲ್ಲವಾಗಿದ್ದು, ಜಗತ್ತಿನಾದ್ಯಂತ ಕೊರೋನ ವೈರಸ್ ಸೋಂಕು ಪೀಡಿತರ ಸಂಖ್ಯೆ 7.90 ಕೋಟಿಯನ್ನು ದಾಟಿದೆ ಎಂದು ಮೇರಿಲ್ಯಾಂಡ್‌ನ ಜಾನ್‌ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ಶನಿವಾರ ತಿಳಿಸಿದೆ. ಕೋವಿಡ್-19 ಪ್ರಕರಣಗಳ ಸಂಖ್ಯೆ ಪ್ರಸಕ್ತ 79,815,237 ಕೋಟಿಯಷ್ಟಿದ್ದು, ಅದರಲ್ಲಿ ಸೋಂಕಿನಿಂದ ಸಂಭವಿಸಿದ 17,50,262 ಸಾವುಗಳೂ ಸೇರಿವೆ ಎಂದು ಜೆಎಚ್‌ಯುವಿನ ಸೆಂಟರ್‌ಫಾರ್ ಸಿಸ್ಟಮ್ಸ್ ಆ್ಯಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ವರದಿ ಮಾಡಿದೆ.
ಜಗತ್ತಿನಲ್ಲೇ ಕೊರೋನ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಹಾಗೂ ಬ್ರೆಝಿಲ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ. ಕೋವಿಡ್-19 ನಿಂದಾಗಿ ಗರಿಷ್ಠ ಸಂಖ್ಯೆಯ ಸಾವುಗಳು ಸಂಭವಿಸಿದ ದೇಶಗಳ ಪಟ್ಟಿಯಲ್ಲಿ ಬ್ರೆಝಿಲ್ ಎರಡನೆ ಸ್ಥಾನದಲ್ಲಿದದು, ಅಲ್ಲಿ ಇದುವರೆಗೆ 1,99, 488 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ರಶ್ಯದಲ್ಲಿ ಈ ತನಕ 29,63, 290 ಕೋವಿಡ್-19 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಒಟ್ಟು 52,985 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಯುರೋಪ್ ರಾಷ್ಟ್ರವಾದ ಫ್ರಾನ್ಸ್‌ನಲ್ಲಿ 26,04,595 ಪ್ರಕರಣಗಳು ವರದಿಯಾಗಿದ್ದು, 62,548 ಮಂದಿ ಸಾವನ್ನಪ್ಪಿದ್ದಾರೆ.
ಬ್ರಿಟನ್‌ನಲ್ಲಿ 22,27,947 ಪ್ರಕರಣಗಳು ವರದಿಯಾಗಿದ್ದರೆ, 70.302 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಈ ಮಧ್ಯೆ ಬ್ರಿಟನ್‌ನಲ್ಲಿ ರೂಪಾಂತರಿತ ಕೊರೋನ ವೈರಸ್ ಕಾಣಿಸಿಕೊಂಡಿರುವುದು ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ. ಈ ಹೊಸ ರೂಪದ ವೈರಸ್ ಅತ್ಯಂತ ಸೋಂಕು ಕಾರಣವಾಗಿದ್ದು, ಸಾಮಾನ್ಯ ಕೊರೋನ ವೈರಸ್‌ಗಿಂತ ಶೇ.70ರಷ್ಟು ಕ್ಷಿಪ್ರ ಹರಡುವಿಕೆಯ ಸಾಮರ್ಥ್ಯವನ್ನು ಹೊಂದಿದೆ.
ಭಾರತದಲ್ಲಿ ಗರಿಷ್ಠ ಚೇತರಿಕೆ
ಜಗತ್ತಿನಾದ್ಯಂತ ಇದುವರೆಗೆ 4,49,78,603 ಮಂದಿ ಕೊರೋನ ಸೋಂಕಿತರು ಗುಣಮುಖರಾಗಿದ್ದಾರೆ. ಕೊರೋನ ವೈರಸ್‌ನಿಂದ ಚೇತರಿಸಿಕೊಂಡವರ ಸಂಖ್ಯೆಯಲ್ಲಿ ಭಾರತವು ಜಗತ್ತಿನಲ್ಲೇ ನಂ.1 ಸ್ಥಾನದಲ್ಲಿದೆ, ಭಾರತದಲ್ಲಿ ಇದುವರೆಗೆ 90.71 ಲಕ್ಷ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಅಮೆರಿಕವು ಜಗತ್ತಿನಲ್ಲೇ ಅತ್ಯಧಿಕವಾಗಿ ಕೊರೋನ ಬಾಧಿತ ದೇಶವಾಗಿದೆ. ಅತಿಹೆಚ್ಚಿನ ಸಂಖ್ಯೆ ಸೋಂಕಿನ ಹಾಗೂ ಸಾವಿನ ಪ್ರಕರಣಗಳು ಆ ದೇಶದಿಂದಲೇ ವರದಿಯಾಗಿವೆ. ಪ್ರಸಕ್ತ ಅಮೆರಿಕದಲ್ಲಿ 1,87,56,360 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 3,30,246 ಮಂದಿ ಸಾವನ್ನಪ್ಪಿದ್ದಾರೆ.