×
Ad

ಯುರೋಪ್ ಒಕ್ಕೂಟದಲ್ಲಿ ಕೊರೋನ ಲಸಿಕೆ ನೀಡಿಕೆಯ ಮಹಾ ಅಭಿಯಾನ ಆರಂಭ

Update: 2020-12-27 22:33 IST

ವಾರ್ಸಾ, ಡಿ.27: ಯುರೋಪ್ ಒಕ್ಕೂಟದ ರಾಷ್ಟ್ರಗಳು ರವಿವಾರ ಕೊರೋನ ಲಸಿಕೆ ವಿತರಿಸುವ ಮಹಾ ಅಭಿಯಾನವನ್ನು ಆರಂಭಿಸಿದ್ದು, ಮೊದಲ ಹಂತದಲ್ಲಿ ವೈದ್ಯಕೀಯ ಕಾರ್ಯಕರ್ತರು, ನರ್ಸಿಂಗ್ ಹೋಂ ಸಿಬ್ಬಂದಿ ಹಾಗೂ ರಾಜಕಾರಣಿಗಳಿಗೆ ನೀಡಲಾಗುತ್ತಿದೆ.

ಲಸಿಕೆ ಬಿಡುಗಡೆಯ ಸಂಭ್ರಮಾಚರಣೆಯ ವಿಡಿಯೋವೊಂದನ್ನು ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವೊನ್ ಡೆರ್ ಲಿಯೆನ್ ಅವರು ವಿಡಿಯೋ ಒಂದನ್ನು ಬಿಡುಗಡೆಗೊಳಿಸಿದ್ದು, ಈ ಅಭಿಯಾನವು ಯುರೋಪ್ ಒಕ್ಕೂಟದ 45 ಕೋಟಿ ಜನರನ್ನು ಈ ಶತಮಾನದ ಅತ್ಯಂತ ಘೋರ ಆರೋಗ್ಯ ಬಿಕ್ಕಟ್ಟಿನಿಂದ ರಕ್ಷಿಸುವುದಕ್ಕಾಗಿ ನಡೆಯುತ್ತಿರುವ ಸಮರದ ನಿರ್ಣಾಯಕ ಕ್ಷಣವಾಗಿದೆಯೆಂದು ಬಣ್ಣಿಸಿದ್ದಾರೆ.

ಜರ್ಮನಿ, ಹಂಗರಿ, ಸ್ಲೋವಕಿಯಾಗಳಲ್ಲಿ ಒಂದು ದಿನ ಮುಂಚಿತವಾಗಿ, ಶನಿವಾರ ಲಸಿಕೆ ನೀಡಿಕೆಯನ್ನು ಆರಂಭಿಸಲಾಗಿದೆ.ಜರ್ಮನಿಯ ನರ್ಸಿಂಗ್ ಹೋಂ ಒಂರಲ್ಲಿ 101 ವರ್ಷ ವಯಸ್ಸಿನ ವೃದ್ಧೆಸೇರಿದಂತೆ ಹಲವಾರು ಮಂದಿಗೆ ಲಸಿಕೆ ನೀಡಲಾಯಿತು.

ಜಗತ್ತಿನಲ್ಲೇ ಕೊರೋನ ವೈರಸ್ ಆರಂಭದಲ್ಲಿ ಕಾಣಿಸಿಕೊಂಡು, ತೀವ್ರವಾಗಿ ಬಾಧೆಗೊಳಗಾದ ರಾಷ್ಟ್ರಗಳಾದ ಸ್ಪೇನ್ ಹಾಗೂ ಇಟಲಿ, ಝೆಕ್ ಗಣ ರಾಜ್ಯಗಳಲ್ಲಿಯೂ ಲಸಿಕೆ ನೀಡಿಕೆಯನ್ನು ಆರಂಭಿಸಲಾಗಿದೆ. ಯುರೋಪ್ ಒಕ್ಕೂಟದ 27 ರಾಷ್ಟ್ರಗಳಲ್ಲಿ ಒಟ್ಟಾರೆ 1.60 ಕೋಟಿ ಕೊರೋನವೈರಸ್ ಸೋಂಕು ಪ್ರಕರಣಗಳು ದಾಖಲಾಗಿದ್ದು, 3.36 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.

ಮೊದಲ ಹಂತದಲ್ಲಿ ಜರ್ಮನಿಯ ಬಯೋಎನ್‌ಟೆಕ್ ಹಾಗೂ ಫೈಝರ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೋನ ಲಸಿಕೆಯ 10 ಸಾವಿರ ಡೋಸ್‌ಗಳು ಬಿಡುಗಡೆಯಾಗಿದ್ದು, ಅವು ಯುರೋಪ್ ಒಕ್ಕೂಟದ ದೇಶಗಳಿಗಷ್ಟೇ ಸೀಮಿತವಾಗಿವೆ. ಈ ಲಸಿಕೆಯನ್ನು ಸಾಮುದಾಯಿಕವಾಗಿ ನೀಡುವ ಅಭಿಯಾನ ಜನರಿಯಲ್ಲಿ ಆರಂಭವಾಗಲಿದೆ.

ಕೊರೋನ ಸೋಂಕಿಗೆ 71 ಸಾವಿರಕ್ಕೂ ಅಧಿಕ ಮಂದಿ ಬಲಿಯಾದ ಇಟಲಿಯಲ್ಲಿ ರೋಮ್ ನಗರ ಸ್ಪಾಲ್ಲಾನ್‌ಝಾನಿ ಆಸ್ಪತ್ರೆಯ ಸೋಂಕುರೋಗ ವಿಭಾಗದ ನರ್ಸ್ ಒಬ್ಬರು ಲಸಿಕೆಯನ್ನು ಚುಚ್ಚಿಸಿಕೊಂಡ ದೇಶದ ಮೊದಲಿಗರಾಗಿದ್ದಾರೆ.

ಬ್ರಿಟನ್‌ನಲ್ಲಿ ವ್ಯಾಪಕವಾಗಿ ಹರಡುತ್ತಿರುವ ರೂಪಾಂತರಿ ಕೊರೋನ ವೈರಸ್ ವಿರುದ್ಧವೂ ತನ್ನ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಹೇಳಿದೆ. ಆದಾಗ್ಯೂ ಅದನ್ನು ಸಂಪೂರ್ಣವಾಗಿ ದೃಢೀಕರಿಸಿಕೊಳ್ಳಲು ಇನ್ನಷ್ಟು ಅಧ್ಯಯನದ ಅಗತ್ಯವಿರುವುದಾಗಿ ತಿಳಿಸಿದೆ.

ಯುರೋಪಿಯನ್ ಒಕ್ಕೂಟವು ಜನವರಿ 6ರಂದು ಮೊಡೆರ್ನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರೋನ ಲಸಿಕೆಗೂ ಅನುಮೋದನೆ ನೀಡುವ ಬಗ್ಗೆ ಪರಿಶೀಲಿಸುತ್ತಿದೆ. ಈಗಾಗಲೇ ಮೊಡೆರ್ನಾದ ಲಸಿಕೆಯ ಬಳಕೆಗೆ ಅಮೆರಿಕವು ಅನುಮೋದನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News