ಡೇನಿಯಲ್ ಪರ್ಲ್ ಹತ್ಯೆ ಪ್ರಕರಣ: ಆರೋಪಿಗಳನ್ನು ಬಿಡುಗಡೆಗೊಳಿಸದಿರಲು ಸಿಂಧ್ ಪ್ರಾಂತ ಸರಕಾರ ನಿರ್ಧಾರ

Update: 2020-12-27 17:10 GMT

ಇಸ್ಲಾಮಾಬಾದ್, ಡಿ.27: ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ಅವರ ಅಪಹರಣ ಹಾಗೂ ಹತ್ಯೆ ಪ್ರಕರಣದ ಆರೋಪಿಗಳಾದ ಬ್ರಿಟನ್ ಸಂಜಾತ ಅಲ್‌ಖಾಯಿದಾ ನಾಯಕ ಅಹ್ಮದ್ ಉಮರ್ ಸಯೀದ್ ಶೇಖ್ ಹಾಗೂ ಆತನ ಮೂವರು ಸಹಚರರನ್ನು ಬಿಡುಗಡೆಗೊಳಿಸದಿರಲು ಪಾಕಿಸ್ತಾನದ ಸಿಂಧ್ ಪ್ರಾಂತ ಸರಕಾರವು ನಿರ್ಧರಿಸಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅದು ಈ ನಿರ್ಧಾರವನ್ನು ಕೈಗೊಂಡಿದೆ.

ಅಚ್ಚರಿಯ ನಡೆಯೊಂದರಲ್ಲಿ, ಗುರುವಾರ ಸಿಂಧ್ ಹೈಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠವು ಸಯೀದ್ ಶೇಖ್ ಹಾಗೂ ಇತರ ಆರೋಪಿಗಳನ್ನು ಯಾವುದೇ ರೀತಿಯ ಬಂಧನದಲ್ಲಿರಿಸಕೂಡದೆಂದು ಆದೇಶಿಸಿತ್ತು. ಈ ಆರೋಪಿಗಳ ಬಂಧನಕ್ಕೆ ಸಂಬಂಧಿಸಿ ಸಿಂಧ್ ಸರಕಾರವು ಪ್ರಕಟಿಸಿರುವ ಎಲ್ಲಾ ಅಧಿಸೂಚನೆಗಳು ಅಸಿಂಧು ಹಾಗೂ ಅನೂರ್ಜಿತವೆಂದು ಘೋಷಿಸಿತ್ತು.

ಆದಾಗ್ಯೂ ಅವರ ಬಿಡುಗಡೆ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಯಾವುದೇ ರೀತಿಯ ಆದೇಶವನ್ನು ಹೊರಡಿಸಿದಲ್ಲಿ ಅವರನ್ನು ಬಂಧಮುಕ್ತಗೊಳಿಸಕೂಡದೆಂದು ಸಿಂಧ್ ಹೈಕೋರ್ಟ್ ಸ್ಪಷ್ಟಪಡಿಸಿತ್ತು.

ಸಯೀದ್‌ಶೇಖ್‌ನನ್ನು ದೋಷಮುಕ್ತಗೊಳಿಸಿ ಸಿಂಧ್ ಹೈಕೋರ್ಟ್ ಎಪ್ರಿಲ್‌ನಲ್ಲಿ ನೀಡಿದ ತೀರ್ಪನ್ನು ಪ್ರಶ್ನಿಸಿ ಸಿಂಧ್ ಸರಕಾರ ಹಾಗೂ ಡೇನಿಯಲ್ ಪರ್ಲ್ ಅವರ ಕುಟುಂಬವು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಪಾಕ್ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಮುಶೀರ್ ಆಲಂ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ನಡೆಸುತ್ತಿದೆ. ಸೆಪ್ಟೆಂಬರ್ 28ರಂದು ನ್ಯಾಯಪೀಠವು ಈ ಬಗ್ಗೆ ನೀಡಿದ ಆದೇಶವೊಂದರಲ್ಲಿ, ಮುಂದಿನ ಆಲಿಕೆವರೆಗೂ ಆರೋಪಿಗಳನ್ನು ಬಿಡುಗಡೆಗೊಳಿಸಬಾರದೆಂದು ಸೂಚಿಸಿತ್ತು.

ಡೇನಿಯಲ್ ಪರ್ಲ್ ಹತ್ಯೆ ಆರೋಪಿಗಳನ್ನು ಬಿಡುಗಡೆಗೊಳಿಸಿ, ಸಿಂಧ್ ಹೈಕೋರ್ಟ್ ಡಿಸೆಂಬರ್ 24ರಂದು ನೀಡಿದ ಆದೇಶವನ್ನು ಕೂಡಾ ತಾನು ಪ್ರಶ್ನಿಸುವುದಾಗಿ ಸಿಂಧ್ ಸರಕಾರ ತಿಳಿಸಿದೆ.

ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯ ದಕ್ಷಿಣ ಏಶ್ಯಾ ವಿಭಾಗದ ಮುಖ್ಯಸ್ಥರಾಗಿದ್ದ 38 ವರ್ಷ ವಯಸ್ಸಿನ ಡೇನಿಯಲ್ ಪರ್ಲ್ , ತನಿಖಾ ವರದಿಗಾರಿಕೆಗಾಗಿ ಪಾಕಿಸ್ತಾನದಲ್ಲಿದ್ದಾಗ ಅವರನ್ನು ಅಪಹರಿಸಿ ಹತ್ಯೆಗೈಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News