ಆಡಳಿತ ಪಕ್ಷದ ನಾಯಕರ ನಡುವೆ ಭಿನ್ನಮತ ಬಗೆಹರಿಸಲು ಚೀನಾದ ಸಂಧಾನ

Update: 2020-12-27 17:13 GMT

ಕಠ್ಮಂಡು, ಡಿ.27: ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿರುವ ಬಗ್ಗೆ ಆತಂಕಗೊಂಡಿರುವ ಚೀನಾವು, ಅಲ್ಲಿನ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದಲ್ಲಿ ಕಚ್ಚಾಟದಲ್ಲಿ ತೊಡಗಿರುವ ಎರಡು ಬಣಗಳ ನಡುವೆ ಏಕತೆ ಮೂಡಿಸುವ ಯತ್ನವಾಗಿ ಚೀನಾ ಕಮ್ಯೂನಿಸ್ಟ್ ಪಕ್ಷದ ಉನ್ನತ ನಿಯೋಗವನ್ನು ರವಿವಾರ ಕಠ್ಮಂಡುವಿಗೆ ಕಳುಹಿಸಿಕೊಟ್ಟಿದೆ.

ಚೀನಾ ಕಮ್ಯೂನಿಸ್ಟ್ ಪಕ್ಷದ ಅಂತಾರಾಷ್ಟ್ರೀಯ ವಿಭಾಗದ ಉಪಸಚಿವ ಗುವೊ ಯೆಝುವೊ ನೇತೃತ್ವದದ ನಿಯೋಗವು ಕಠ್ಮಂಡುವಿಗೆ ಆಗಮಿಸಿದೆ. ನಿಯೋಗವು ನೇಪಾಳದ ಆಡಳಿತಾರೂಢ ಪಕ್ಷದ ಎಲ್ಲಾ ಬಣಗಳು ಹಾಗೂ ನಾಯಕರ ಜೊತೆ ಮಾತುಕತೆ ನಡೆಸಲಿದ್ದು, ಅವರ ನಡುವೆ ಮೂಡಿರುವ ಭಿನ್ನಮತವನ್ನು ಬಗೆಹರಿಸಲು ಸಹಕರಿಸಲಿದೆಯಂದು ನೇಪಾಳಿ ಮಾಧ್ಯಮವೊಂದು ವರದಿ ಮಾಡಿದೆ.

ನೇಪಾಳ ಸಂಸತ್ತನ್ನು ವಿಸರ್ಜಿಸುವ ಪ್ರಧಾನಿ ಕೆ.ಪಿ. ಒಲಿಯವರ ನಡೆಯಿಂದ ಉಂಟಾಗಿರುವ ರಾಜಕೀಯ ಗೊಂದಲವನ್ನು ಬಗೆಹರಿಸಲು ನೇಪಾಳದಲ್ಲಿನ ಚೀನಿ ರಾಯಭಾರಿ ಹೊ ಯಾಂಕಿ ಅವರು ನೇಪಾಳದ ಅಧ್ಯಕ್ಷೆ ಬಿದ್ಯಾ ಭಂಡಾರಿ ಅವರೊಂದಿಗೆ ಒಂದು ತಾಸು ಮಾತುಕತೆ ನಡೆಸಿದ ಬಳಿಕ ಚೀನಾವು ತನ್ನ ನಿಯೋಗವನ್ನು ಕಳುಹಿಸುವ ನಿರ್ಧಾರವನ್ನು ಪ್ರಕಟಿಸಿತ್ತು.

ಭಾರತವು ಈ ಎಲ್ಲಾ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದು, ಚೀನಾವು ನೇಪಾಳದ ರಾಜಕಾರಣದಲ್ಲಿ ಬಹಿರಂಗವಾಗಿ ಶಾಮೀಲಾಗುತ್ತಿರುವ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News