ನನಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿರಲಿಲ್ಲ: ನಿತೀಶ್ ಕುಮಾರ್

Update: 2020-12-28 14:30 GMT

ಪಾಟ್ನಾ,ಡಿ.28: ತನಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿರಲಿಲ್ಲ ಮತ್ತು ಬಿಜೆಪಿ ತನ್ನ ಮುಖ್ಯಮಂತ್ರಿಯನ್ನು ನೇಮಿಸಬಹುದು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ಹೇಳಿದ್ದಾರೆ.

ರವಿವಾರ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ನಿತೀಶ್, ‘ನಾನು ಹುದ್ದೆಗೆ ಅಂಟಿಕೊಂಡಿಲ್ಲ. ಮುಖ್ಯಮಂತ್ರಿಯಾಗಬೇಕು ಎಂದು ನಾನು ಬಯಸಿರಲಿಲ್ಲ. ಚುನಾವಣೆಯಲ್ಲಿ ಜನರು ತಮ್ಮ ಆದೇಶವನ್ನು ನೀಡಿದ್ದಾರೆ ಮತ್ತು ಯಾರನ್ನು ಬೇಕಾದರೂ ಮುಖ್ಯಮಂತ್ರಿಯನ್ನಾಗಿ ನೇಮಿಸಬಹುದು ಎಂದು ನಾನು ತಿಳಿಸಿದ್ದೆ. ಬಿಜೆಪಿ ತನ್ನದೇ ಆದ ಮುಖ್ಯಮಂತ್ರಿಯನ್ನು ನೇಮಿಸಬಹುದು ’ಎಂದು ಹೇಳಿದರು.

ಅರುಣಾಚಲ ಪ್ರದೇಶದಲ್ಲಿ ಏಳು ಜೆಡಿಯು ಶಾಸಕರ ಪೈಕಿ ಆರು ಜನರು ಬಿಜೆಪಿಗೆ ಪಕ್ಷಾಂತರಗೊಂಡಿರುವ ಹಿನ್ನೆಲೆಯಲ್ಲಿ ನಿತೀಶ್ ರ ಈ ಹೇಳಿಕೆ ಹೊರಬಿದ್ದಿದೆ.

ಬಿಹಾರದ ಮೈತ್ರಿ ಸರಕಾರದಲ್ಲಿ ಯಾವುದೇ ವಿವಾದವಿಲ್ಲ, ಹೀಗಾಗಿ ಅರುಣಾಚಲ ಪ್ರದೇಶದಲ್ಲಿಯ ಬೆಳವಣಿಗೆಗಳು ಬಿಹಾರದ ರಾಜಕೀಯದ ಮೇಲೆ ಪರಿಣಾಮವನ್ನುಂಟು ಮಾಡುವುದಿಲ್ಲ ಎಂದು ನಿತೀಶ್ ಈ ಹಿಂದೆ ಸ್ಪಷ್ಟಪಡಿಸಿದ್ದರು.

ಇತ್ತೀಚಿಗೆ ಪಕ್ಷದ ಮುಖ್ಯಸ್ಥನ ಸ್ಥಾನವನ್ನು ತೊರೆದಿದ್ದ ನಿತೀಶ್ ಅದನ್ನು ಜೆಡಿಯು ನಾಯಕ ರಾಮಚಂದ್ರ ಪ್ರಸಾದ್ ಸಿಂಗ್ ಅವರಿಗೆ ವಹಿಸಿದ್ದರು.

ಬಿಹಾರದ ಎನ್‌ಡಿಎ ಸರಕಾರದಲ್ಲಿ ಜೆಡಿಯು, ಬಿಜೆಪಿ, ಎಚ್‌ಎಎಂ ಮತ್ತು ವಿಐಪಿ ಪಾಲುದಾರ ಪಕ್ಷಗಳಾಗಿವೆ.

ನಿತೀಶ್ ಸಿಎಂ ಆಗಲು ಬಯಸಿರಲಿಲ್ಲ: ಸುಶೀಲ್ ಕುಮಾರ್ ಮೋದಿ

ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಲು ಬಯಸಿರಲಿಲ್ಲ. ಆದರೆ ಜೆಡಿಯು, ಬಿಜೆಪಿ ಮತ್ತು ವಿಐಪಿ ನಾಯಕರ ಮನವಿಯ ಮೇರೆಗೆ ಮುಖ್ಯಮಂತ್ರಿಯಾಗಲು ಅವರು ಒಪ್ಪಿಕೊಂಡಿದ್ದರು ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅರುಣಾಚಲ ಪ್ರದೇಶದಲ್ಲಿನ ಬೆಳವಣಿಗೆಗಳು ಬಿಹಾರದಲ್ಲಿ ಮತ್ತು ಬಿಹಾರ ಸರಕಾರದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಬಿಹಾರದಲ್ಲಿಯ ಬಿಜೆಪಿ-ಜೆಡಿಯು ಮೈತ್ರಿಕೂಟವು ಅಭೇದ್ಯವಾಗಿದೆ. ನಿತೀಶ ಕುಮಾರ ಮಾರ್ಗದರ್ಶನದಲ್ಲಿ ಸರಕಾರವು ಸಂಪೂರ್ಣ ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News