ಉತ್ತರಪ್ರದೇಶ: ಮಾವಿನ ಮರದಿಂದ ಎಲೆ ಕಿತ್ತ ಕಾರಣಕ್ಕೆ ಥಳಿತ: ಮನನೊಂದು ದಲಿತ ಯುವಕ ಆತ್ಮಹತ್ಯೆ

Update: 2020-12-30 16:53 GMT

ಫತೇಹ್‌ಪುರ, ಡಿ. 30: ಇಪ್ಪತ್ತಾರು ವರ್ಷದ ದಲಿತ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶ ಫತೇಹ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಸಂಭವಿಸಿದೆ. ಮಾವಿನ ಮರದ ಎಲೆ ಕಿತ್ತ ಕಾರಣಕ್ಕೆ ಕೆಲವರು ಥಳಿಸಿರುವುದರಿಂದ ಖಿನ್ನನಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಯುವಕನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಮಲ್ವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಆಸ್ಟಾ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಧರ್ಮಪಾಲ್ ದಿವಾಕರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಲ್ವಾನ್ ಪೊಲೀಸ್ ಠಾಣೆ ಅಧಿಕಾರಿ ಶೇರ್ ಸಿಂಗ್ ರಜಪೂತ್ ಬುಧವಾರ ಹೇಳಿದ್ದಾರೆ. ಗ್ರಾಮದಲ್ಲಿ ಆಡು ಮೇಯಿಸುತ್ತಿರುವ ಸಂದರ್ಭ ಮಾವಿನ ಮರದಿಂದ ಎಲೆಗಳನ್ನು ಕಿತ್ತಿರುವುದಕ್ಕೆ ಗುಂಪೊಂದು ದಿವಾಕರನಿಗೆ ಥಳಿಸಿತ್ತು ಎಂದು ಸಂತ್ರಸ್ತನ ಕುಟುಂಬ ಆರೋಪಿಸಿದೆ ಎಂದು ಅವರು ತಿಳಿಸಿದ್ದಾರೆ. ಮನೆಗೆ ಹಿಂದಿರುಗಿದ ಬಳಿಕ ದಿವಾಕರ ರೂಮಿಗೆ ಚಿಲಕ ಹಾಕಿ ಏಕಾಂಗಿಯಾಗಿದ್ದ. ಅನಂತರ ಆತ್ಮಹತ್ಯೆ ಮಾಡಿಕೊಂಡ ಎಂದು ಅವರು ಹೇಳಿದ್ದಾರೆ.

ದಿವಾಕರನ ಕುಟುಂಬ ದಾಖಲಿಸಿದ ದೂರಿನ ಆಧಾರದಲ್ಲಿ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಲ್ಲಿ ಮೂವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ರಜಪೂತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News