×
Ad

ಲಂಚದ ಆರೋಪ: ಸ್ಯಾಮ್‌ಸಂಗ್ ವರಿಷ್ಠ ಲೀ ಜೇ ಯೊಂಗ್‌ಗೆ 9 ವರ್ಷ ಜೈಲು ಶಿಕ್ಷೆ ಕೋರಿದ ಪ್ರಾಸಿಕ್ಯೂಶನ್

Update: 2020-12-30 23:23 IST

ಸೋಲ್,ಡಿ.30: ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿ ಸ್ಯಾಮ್‌ಸಂಗ್ ಕಂಪೆನಿಯ ತಥಾಕಥಿತ ವರಿಷ್ಠ ಲೀ ಜೇ-ಯೊಂಗ್‌ಗೆ 9 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕೆಂದು ಕೋರಿ ಪ್ರಾಸಿಕ್ಯೂಟರ್‌ಗಳು ಬುಧವಾರ ಉಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

2016ರಲ್ಲಿ ಬಯಲಾದ ಭ್ರಷ್ಟಾಚಾರ ಪ್ರಕರಣವು ದಕ್ಷಿಣ ಕೊರಿಯದಲ್ಲಿ ವ್ಯಾಪಕವಾಗಿ ಪ್ರತಿಭಟನೆಯನ್ನು ಭುಗಿಲೆಬ್ಬಿಸಿತ್ತು ಹಾಗೂ ರಾಷ್ಟ್ರಾಧ್ಯಕ್ಷರ ಪದತ್ಯಾಗಕ್ಕೆ ಕಾರಣವಾಗಿತ್ತು.

     ವಿಶೇಷ ಪ್ರಾಸಿಕ್ಯೂಟರ್ ಪಾರ್ಕ್ ಯಂಗ್-ಸೂ ಅವರು ಲೀ ಅವರಿಗೆ 9 ವರ್ಷ ಜೈಲುವಾಸ ವಿಧಿಸಬೇಕೆಂದು ಕೋರಿ, ಸೋಲ್‌ನ ಹೈಕೋರ್ಟ್‌ಗೆ ಬುಧವಾರ ಮನವಿ ಮಾಡಿದರು. ತನ್ನ ಪ್ರತಿಸ್ಪರ್ಧಿ ಕಂಪೆನಿಗಳಿಗಿಂತ ಹೆಚ್ಚು ಸವಲತ್ತುಗಳನ್ನು ಸರಕಾರದಿಂದ ಪಡೆಯಲು ಸ್ಯಾಮ್‌ಸಂಗ್ ಸಂಸ್ಥೆಯು ಸಕ್ರಿಯವಾಗಿ ವಶೀಲಿ ನಡೆಸಿದೆ. ದೇಶದಲ್ಲಿ ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡುವ ಪ್ರಯತ್ನಗಳಿಗೆ ಸ್ಯಾಮ್‌ಸಂಗ್ ಪ್ರಕರಣವು ನಿದರ್ಶನವಾಗಬೇಕೆಂದು ಹೇಳಿದರು.

    2017ರಲ್ಲಿ ದಕ್ಷಿಣ ಕೊರಿಯದ ಆಗಿನ ಅಧ್ಯಕ್ಷೆ ಪಾರ್ಕ್ ಗ್ಯೂ ಹೆ ಹಾಗೂ ಆಕೆಯ ನಿಕಟವರ್ತಿಯೊಬ್ಬರಿಗೆ 7 ದಶಲಕ್ಷ ಡಾಲರ್ ಲಂಚ ನೀಡಿದ ಆರೋಪದಲ್ಲಿ ಸ್ಯಾಮ್‌ಸಂಗ್‌ನ ಉಪಚೇರ್‌ಮನ್ ಆಗಿದ್ದ 52 ವರ್ಷ ವಯಸ್ಸಿನ ಲೀ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಲಾಗಿತ್ತು. ಸ್ಯಾಮ್‌ಸಂಗ್ ಕಂಪೆನಿಯ ಮೇಲಿನ ತನ್ನ ನಿಯಂತ್ರಣವನ್ನು ಬಲಪಡಿಸುವುದಕ್ಕೆ ಸರಕಾರದ ಬೆಂಬಲವನ್ನು ಬಯಸಿ ಲೀ ಅವರು ಲಂಚ ನೀಡಿದ್ದಾರೆನ್ನಲಾಗಿದೆ. ಆದರೆ 2018ರಲ್ಲಿ ಸೋಲ್ ಹೈಕೋರ್ಟ್ ಅವರ ಜೈಲು ಶಿಕ್ಷೆಯ ಅವಧಿಯನ್ನು ಎರಡೂವರೆ ವರ್ಷಗಳಿಗೆ ಇಳಿಸಿತ್ತು.

   ಕಳೆದ ವರ್ಷ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಹೈಕೋರ್ಟ್‌ಗೆ ಮರಳಿಸಿತು ಹಾಗೂ ಲೀ ಅವರ ಲಂಚದ ಮೊತ್ತವನ್ನು ಕಡಿಮೆಯಾಗಿ ತೋರಿಸಲಾಗಿದೆಯೆಂದು ಹೇಳಿತ್ತು.

   ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶೇರು ದರದಲ್ಲಿ ಅಕ್ರಮ ನಡೆಸಿದ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ಲೀ ಅವರನ್ನು ದೋಷಿಯೆಂದು ಪರಿಗಣಿಸಬೇಕೆಂದು ಕೋರಿ ಪ್ರಾಸಿಕ್ಯೂಟರ್‌ಗಳು ಕೋರ್ಟ್‌ಗೆ ಮನವಿ ಮಾಡಿದ್ದರು. 2015ರಲ್ಲಿ ಸ್ಯಾಮ್‌ಸಂಗ್‌ನ ಎರಡು ಸಹ ಸಂಸ್ಥೆಗಳ ವಿಲೀನಗೊಳಿಸಿದ ಹಗರಣಕ್ಕೆ ಸಂಬಂಧಿಸಿ ಲೀ ವಿರುದ್ಧ ವಿಶ್ವಾಸಭಂಗ ಹಾಗೂ ಲೆಕ್ಕಪತ್ರ ಅವ್ಯವಹಾರದ ಆರೋಪವನ್ನು ಹೊರಿಸಲಾಗಿತ್ತು. ಸ್ಯಾಮ್‌ಸಂಗ್ ಇಲೆಕ್ಟ್ರಾನಿಕ್ಸ್ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸುವುದಕ್ಕೆ ನೆರವಾಗಲು ಲೀ ಅವರು ಅಕ್ರಮವಾಗಿ ಈ ವಿಲೀನವನ್ನು ಏರ್ಪಡಿಸಿದ್ದರೆನ್ನಲಾಗಿದೆ.

ಆದರೆ ಲೀ ಅವರ ವಕೀಲರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. 2015ರಲ್ಲಿ ನಡೆದಿರುವ ಸ್ಯಾಮ್‌ಸಂಗ್ ಸಹಕಂಪೆನಿಗಳ ವಿಲೀನವು ಸಾಮಾನ್ಯ ಉದ್ಯಮ ಚಟುವಟಿಕೆಯಾಗಿತ್ತೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News