×
Ad

ರೂಪಾಂತರಿ ವೈರಸ್‌ನ ತೀವ್ರತೆ ಇತರ ವೈರಾಣುಗಳಿಗಿಂತ ಅಧಿಕವಲ್ಲ

Update: 2020-12-30 23:43 IST

ಲಂಡನ್,ಡಿ.30: ರೂಪಾಂತರಿ ಕೊರೋನ ವೈರಸ್ ಅತ್ಯಂತ ವೇಗವಾಗಿ ಹರಡುವುದಾದರೂ, ತನ್ನ ಇತರ ಪ್ರಭೇದಗಳಿಗಿಂತಲೂ ಹೆಚ್ಚು ತೀವ್ರವಾದ ಅನಾರೋಗ್ಯಕ್ಕೆ ಕಾರಣವಾಗುವ ಹಾಗೆ ಕಾಣಿಸುತ್ತಿಲ್ಲವೆಂದು ಬ್ರಿಟನ್‌ನ ಸಾರ್ವಜನಿಕ ಆರೋಗ್ಯ ಇಲಾಖೆ ನಡೆಸಿದ ಅಧ್ಯಯನ ವರದಿಯೊಂದು ತಿಳಿಸಿದೆ.

ರೂಪಾಂತರಿ ಕೊರೋನ ವೈರಸ್ ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇತರ ಕೆಲವು ದೇಶಗಳು ಬ್ರಿಟನ್ ಮೇಲೆ ಸಂಚಾರ ನಿರ್ಬಂಧಗಳನ್ನು ಹೇರಿದ್ದವು. ಇದೀಗ ಜರ್ಮನಿ,ಫ್ರಾನ್ಸ್ ಸೇರಿದಂತೆ ಇನ್ನೂ ಹಲವಾರು ದೇಶಗಳಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ.

ಈ ಅಧ್ಯಯನದಲ್ಲಿ ಸಂಶೋಧಕರು, ರೂಪಾಂತರಿ ಕೊರೋನ ವೈರಸ್‌ನಿಂದ ಸೋಂಕಿತರಾದ 1769 ಮಂದಿಯನ್ನು, ಸಾಮಾನ್ಯ ಪ್ರಭೇದದ (ವೈಲ್ಡ್‌ಟೈಪ್) ಕೊರೋನ ವೈರಸ್ ಜೊತೆ ಹೋಲಿಸಿದ್ದರು. ಅಧ್ಯಯನದಲ್ಲಿ ಪಾಲ್ಗೊಂಡಿದ್ದ 42ಮಂದಿ ಕೊರೋನ ಸೋಂಕಿತರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದದ್ದರು. ಅವರಲ್ಲಿ 16 ಮಂದಿ ಹೊಸ ಪ್ರಭೇದದ ವೈರಸ್‌ನಿಂದ ಸೋಂಕಿತರಾಗಿದ್ದರೆ, ಇತರ 26 ಮಂದಿ ಸಾಮಾನ್ಯ ತಳಿಯ ಕೊರೋನ ವೈರಸ್‌ನಿಂದ ಸೋಂಕಿತರಾಗಿದ್ದರು. ಆದರೆ ರೂಪಾಂತರಿ ಮತ್ತು ಸಾಮಾನ್ಯ ತಳಿಯ ಕೊರೋನ ವೈರಸ್ ಸೋಂಕಿನ ಕುರಿತ 28 ದಿನಗಳ ಅಧ್ಯಯನದಲ್ಲಿ ಸೋಂಕಿತರ ಆಸ್ಪತ್ರೆ ದಾಖಲೀಕರಣ ಹಾಗೂ ರೋಗದ ತೀವ್ರತೆ ಮತ್ತು ಸಾವಿನ ಪ್ರಕರಣಗಳಲ್ಲಿ ಯಾವುದೇ ಗಣನೀಯ ವ್ಯತ್ಯಾಸ ಕಂಡುಬಂದಿಲ್ಲವೆಂದು ಅಧ್ಯಯನ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News