ಜರ್ಮನಿಯಲ್ಲಿ ಕೊರೋನ ಉಲ್ಬಣ: ಒಂದೇ ದಿನದಲ್ಲಿ 1 ಸಾವಿರ ಮಂದಿ ಬಲಿ

Update: 2021-01-01 12:36 GMT

ಬರ್ಲಿನ್,ಡಿ.30: ಕೊರೋನ ಸೋಂಕು ರೋಗ ಆರಂಭಗೊಂಡಾಗಿನಿಂದ ಇದೇ ಮೊದಲ ಬಾರಿಗೆ ಜರ್ಮನಿಯಲ್ಲಿ ಒಂದೇ ದಿನದಲ್ಲಿ 1 ಸಾವಿರಕ್ಕೂ ಅಧಿಕ ಕೊರೋನಕ್ಕೆ ಸಂಬಂಧಿಸಿದ ಸಾವಿನ ಪ್ರಕರಣಗಳು ವರದಿಯಾಗಿವೆ.

ಇದರೊಂದಿಗೆ ಜರ್ಮನಿಯಲ್ಲಿ ಈವರೆಗೆ ಕೋವಿಡ್-19ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 32,107ಕ್ಕೇರಿದೆ.

ಕಳೆದ 24 ತಾಸುಗಳಲ್ಲಿ ಜರ್ಮನಿಯಲ್ಲಿ ಕೊರೋನಕ್ಕೆ ಸಂಬಂಧಿಸಿದ 1129 ಸಾವಿನ ಪ್ರಕರಣಗಳು ವರದಿಯಾಗಿರುವುದಾಗಿ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ ಬುಧವಾರ ತಿಳಿಸಿದೆ. ಒಂದು ವಾರದ ಹಿಂದೆ 962 ಮಂದಿ ಒಂದೇ ದಿನದಲ್ಲಿ ಕೊರೋನಕ್ಕೆ ಬಲಿಯಾಗಿದ್ದು,ಅದು ಈವರೆಗಿನ ಒಂದು ದಿನದ ಗರಿಷ್ಠ ಸಾವಿನ ಸಂಖ್ಯೆಯಾಗಿತ್ತು. ಕಳೆದ 24 ತಾಸುಗಳಲ್ಲಿ 22,459 ಕೊರೋನ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿರುವುದಾಗಿ ಜರ್ಮನಿಯ ರೋಗ ನಿಯಂತ್ರಣ ಕೇಂದ್ರ ತಿಳಿಸಿದೆ.

ಕೊರೋನ ಹಾವಳಿಯ ಮೊದಲ ಹಂತದಲ್ಲಿ ಜರ್ಮನಿಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕೊರೋನ ಸಾವಿನ ಪ್ರಕರಣಗಳು ವರದಿಯಾಗಿದ್ದವು. ಯುರೋಪ್‌ನ ಪ್ರಮುಖ ರಾಷ್ಟ್ರಗಳ ಪೈಕಿ ಇಟಲಿ, ಬ್ರಿಟನ್, ಫ್ರಾನ್ಸ್ ಹಾಗೂ ಸ್ಪೇನ್‌ಗಳಲ್ಲಿ ಈಗಲೂ ಗರಿಷ್ಠ ಸಂಖ್ಯೆಯಲ್ಲಿ ಕೊರೋನ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ.

ಕೊರೋನ ಹಾವಳಿ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 16ರಿಂದ ಶಾಲೆಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ಜನವರಿ 10ರವರೆಗೆ ಮುಚ್ಚುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News