ಪಾಕಿಸ್ತಾನ: ಹಿಂದೂ ದೇವಾಲಯ ಧ್ವಂಸ; 14 ಆರೋಪಿಗಳ ಬಂಧನ
ಇಸ್ಲಮಾಬಾದ್, ಡಿ.31: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಗುಂಪೊಂದು ಹಿಂದು ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಪ್ರಕರಣ ಗುರುವಾರ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ 14 ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕರಾಕ್ ಜಿಲ್ಲೆಯಲ್ಲಿರುವ ಹಿಂದು ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಸ್ಥಳೀಯ ಆಡಳಿತ ಹಿಂದು ಸಮುದಾಯಕ್ಕೆ ಅನುಮತಿ ನೀಡಿತ್ತು. ಆದರೆ ಇದನ್ನು ವಿರೋಧಿಸಿದ್ದ ಕೆಲವರು, ರಾಜಕೀಯ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಧರ್ಮಗುರುವಿನ ನೇತೃತ್ವದಲ್ಲಿ ದೇವಸ್ಥಾನದ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಾವಿರಕ್ಕೂ ಅಧಿಕ ಮಂದಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯವನ್ನು ವಿರೋಧಿಸಿ ಪ್ರತಿಭಟಿಸಿದ್ದಾರೆ ಎಂದು ಸ್ಥಳೀಯರು ಸುದ್ಧಿವಾಹಿನಿಗೆ ಮಾಹಿತಿ ನೀಡಿದ್ದಾರೆ.
ದೇವಸ್ಥಾನದ ಗೋಡೆಯನ್ನು ಧ್ವಂಸಗೊಳಿಸಿದ ತಂಡ ಘೋಷಣೆ ಕೂಗುತ್ತಿರುವ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇವಸ್ಥಾನದ ನವೀಕರಣ ಕಾರ್ಯವನ್ನು ಗುಟ್ಟಾಗಿ ನಡೆಸುತ್ತಿದ್ದಾರೆ ಎಂದು ತಂಡ ದಾಳಿ ನಡೆಸಿದೆ. ನವೀಕರಣ ಕಾರ್ಯವನ್ನು ವಿರೋಧಿಸಿ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸಲು ತಂಡವೊಂದು ಅನುಮತಿ ಪಡೆದಿತ್ತು. ದೇವಾಲಯ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಹಲವು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಘಟನೆಯ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿದೆ ಎಂದು ಕರಾಕ್ ಜಿಲ್ಲಾ ಪೊಲೀಸ್ ಅಧಿಕಾರಿ ಇರ್ಫಾನುಲ್ಲಾ ಹೇಳಿದ್ದಾರೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಹಿಂದು ದೇವಾಲಯವನ್ನು ಸ್ಥಳೀಯ ಧರ್ಮಗುರು ಸ್ವಾಧೀನ ಪಡಿಸಿಕೊಂಡಿದ್ದು ಅದನ್ನು ಹಿಂದು ಸಮುದಾಯದ ವಶಕ್ಕೆ ಮರಳಿಸಬೇಕು ಎಂಬ ಅರ್ಜಿಯ ಹಿನ್ನೆಲೆಯಲ್ಲಿ, ದೇವಾಲಯವನ್ನು ಜೀರ್ಣೋದ್ಧಾರಗೊಳಿಸಬೇಕು ಎಂದು 2015ರಲ್ಲಿ ಪಾಕ್‌ನ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ ದೇವಾಲಯದ ಜೀರ್ಣೋದ್ಧಾರಕ್ಕೆ ಹಿಂದು ಸಮುದಾಯದವರಿಂದ ದೇಣಿಗೆ ಸಂಗ್ರಹಿಸಿದ್ದು, ಇದು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಪ್ರತಿಪಾದಿಸುತ್ತಿದ್ದಾರೆ. ಈ ದಾಳಿ ಸಾಮರಸ್ಯದ ವಿರುದ್ಧದ ಪಿತೂರಿ’ ಎಂದು ಬಣ್ಣಿಸಿರುವ ಧಾರ್ಮಿಕ ವ್ಯವಹಾರಗಳ ಇಲಾಖೆ ಸಚಿವ ನೂರುಲ್ ಹಖ್ ಖಾದ್ರಿ, ಧಾರ್ಮಿಕ ಅಲ್ಪಸಂಖ್ಯಾತ ಪಂಗಡಗಳ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ನಡೆಸುವುದಕ್ಕೆ ಇಸ್ಲಾಂನಲ್ಲಿ ಆಸ್ಪದವಿಲ್ಲ. ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆ ನಮ್ಮ ಸಾಂವಿಧಾನಿಕ, ಧಾರ್ಮಿಕ, ನೈತಿಕ ಮತ್ತು ರಾಷ್ಟ್ರೀಯ ಜವಾಬ್ದಾರಿಯಾಗಿದೆ ಎಂದಿದ್ದಾರೆ.
‘ದುಷ್ಕರ್ಮಿಗಳ ವಿರುದ್ಧ ಪ್ರಾಂತೀಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ಪ್ರಜೆಗಳ ಹಾಗೂ ಅವರ ಪ್ರಾರ್ಥನಾ ಕೇಂದ್ರದ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ ’ ಎಂದು ಮಾನವ ಹಕ್ಕುಗಳ ಇಲಾಖೆ ಸಚಿವೆ ಶಿರೀನ್ ಮಝಾರಿ ಟ್ವೀಟ್ ಮಾಡಿದ್ದಾರೆ.
ದೇವಾಲಯ ಧ್ವಂಸದ ಘಟನೆಯ ಕುರಿತು ಪಾಕ್ ಸಂಸತ್ತಿನ ಸದಸ್ಯ ಮತ್ತು ಪಾಕಿಸ್ತಾನ ಹಿಂದು ಸಮಿತಿಯ ಮುಖ್ಯಸ್ಥ ರಮೇಶ್ ಕುಮಾರ್ ಸುಪ್ರೀಂಕೋರ್ಟ್‌ನ ಗಮನ ಸೆಳೆದಿದ್ದು, ಪ್ರಕರಣವನ್ನು ಪಾಕಿಸ್ತಾನದ ಮುಖ್ಯ ನ್ಯಾಯಾಧೀಶ ಗುಲ್ಜಾರ್ ಅಹ್ಮದ್ ಗಮನಿಸಿ, 2021ರ ಜನವರಿ 5ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸೂಚಿಸಿದ್ದಾರೆ ಎಂದು ಸುಪ್ರೀಂಕೋರ್ಟ್‌ನ ಹೇಳಿಕೆ ತಿಳಿಸಿದೆ.