ಭೀಮಾ ಕೋರೆಗಾಂವ್ ಯುದ್ಧದ 203ನೇ ವರ್ಷಾಚರಣೆ

Update: 2021-01-01 14:55 GMT

ಪುಣೆ, ಜ.1: ಭೀಮಾ ಕೋರೆಗಾಂವ್ ಯುದ್ಧದ 203ನೇ ವರ್ಷಾಚರಣೆಯ ಅಂಗವಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಮತ್ತಿತರ ಗಣ್ಯರು ಶುಕ್ರವಾರ ಪುಣೆಯ ಸಮೀಪದ ಭೀಮಾ ಕೋರೆಗಾಂವ್‌ನಲ್ಲಿರುವ ‘ಜಯಸ್ತಂಭ’ಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅಜಿತ್ ಪವಾರ್ ಅವರು ಕೊರೋನ ಸಾಂಕ್ರಾಮಿಕದ ಹಾವಳಿಯ ಹಿನ್ನೆಲೆಯಲ್ಲಿ ಸ್ಮಾರಕವನ್ನು ಸಂದರ್ಶಿಸದಂತೆ ಮತ್ತು ಬದಲಿಗೆ ಮನೆಯಲ್ಲಿಯೇ ಉಳಿದುಕೊಂಡು ಶ್ರದ್ಧಾಂಜಲಿ ಅರ್ಪಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಗೃಹ ಸಚಿವ ಅನಿಲ್ ದೇಶಮುಖ್, ವಿದ್ಯುತ್ ಸಚಿವ ಡಾ.ನಿತಿನ್ ರಾವತ್ ಕೂಡಾ ಉಪಸ್ಥಿತರಿದ್ದು, ಸ್ಮಾರಕದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು. ಜಯಸ್ತಂಭವು ಪುಣೆ-ಅಹ್ಮದ್‌ನಗರ ರಸ್ತೆಯಲ್ಲಿರುವ ಪೆರ್ನೆ ಗ್ರಾಮದ ಸಮೀಪದಲ್ಲಿದೆ.

ವಂಚಿತ್ ಬಹುಜನ ಅಘಾಡಿ (ವಿಬಿಎ) ಸಂಘಟನೆಯ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಕೂಡಾ ಜಯಸ್ತಂಭವನ್ನು ಸಂದರ್ಶಿಸಿ, ಗೌರವ ಸಲ್ಲಿಸಿದರು.

 1818ರ ಜನವರಿ 1ರಂದು ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪೆನಿ ಹಾಗೂ ಮರಾಠ ಸಾಮ್ರಾಜ್ಯದ ಪೇಶ್ವೆಗಳ ನಡುವೆ ನಡೆದ ಯುದ್ಧದ ನೆನಪಿಗಾಗಿ ಪ್ರತಿ ವರ್ಷವೂ ಲಕ್ಷಾಂತರ ಜನರು ಜಯಸ್ತಂಭಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸುತ್ತಾರೆ.

  ಜಯಸ್ತಂಭವನ್ನು ಸಂದರ್ಶಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪ್ರಕಾಶ್ ಅಂಬೇಡ್ಕರ್ ಅವರು ಜನವರಿ 1ನೇ ತಾರೀಕು ಸಾಮಾಜಿಕ ಜೀತದಿಂದ ವಿಮೋಚನೆ ಪಡೆಯುವುದನ್ನು ನೆನಪಿಸುವ ದಿನವಾಗಿದೆ ಎಂದರು.

‘‘ಭೀಮಾ ಕೋರೆಗಾಂವ್ ಯುದ್ದವು ಪೇಶ್ವೆಗಳ ಆಡಳಿತದಲ್ಲಿ ಅನುಸರಿಸಲಾಗುತ್ತಿದ್ದ ಅಸ್ಪೃಶ್ಯತೆ ವಿರುದ್ಧ ನಡೆದ ಸಮರವಾಗಿತ್ತು ಹಾಗೂ ಅದು ಯಶಸ್ಸನ್ನು ಕಂಡಿತು’’ ಎಂದು ಹೇಳಿದರು.

  ಪ್ರಜಾಪ್ರಭುತ್ವವು ನೈಜ ರೂಪದಲ್ಲಿ ಮರುಸ್ಥಾಪನೆಯಾಗುವವರೆಗೆ ಅಸ್ಪೃಶ್ಯತೆಯ ವಿರುದ್ಧದ ಸಾಮಾಜಿಕ ಚಳವಳಿ ಅಬಾಧಿತವಾಗಿಯೇ ಮುಂದುವರಿಯಲಿದೆ ಎಂದರು.

ಕೇಂದ್ರ ಸಚಿವ ರಾಮದಾಸ ಅಠಾವಳೆ ಅವರು ಕೂಡಾ ಜಯಸ್ತಂಭಕ್ಕೆ ಭೇಟಿ ನೀಡಿದರು. ಪಠ್ಯಪುಸ್ತಕಗಳಲ್ಲಿ ಭೀಮಾ ಕೋರೆಗಾಂವ್ ಸಮರವನ್ನು ಇತಿಹಾಸದ ಪುಟಕ್ಕೆ ಸೇರ್ಪಡೆಗೊಳಿಸಬೇಕೆಂದು ಶಿಕ್ಷಣ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News