ದಲಿತ ಯುವಕನ ಹತ್ಯೆ: ಮರ್ಯಾದೆಗೇಡು ಹತ್ಯೆ ಶಂಕೆ

Update: 2021-01-01 15:42 GMT

ಕುರ್ನೂಲ್ (ಆಂಧ್ರಪ್ರದೇಶ), ಜ. 1: ಕುರ್ನೂಲ್ ಜಿಲ್ಲೆಯ ಅದೋನಿ ಪಟ್ಟಣದಲ್ಲಿ ಗುರುವಾರ ಸಂಜೆ 34 ವರ್ಷದ ದಲಿತ ಯುವಕನೋರ್ವನನ್ನು ಹತ್ಯೆಗೈಯಲಾಗಿದೆ. ಇದೊಂದು ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾಗಿದೆ.

ಅದೋನಿ ಪಟ್ಟಣದ ಖಾಸಗಿ ಕ್ಲಿನಿಕ್‌ನಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆ್ಯಡಂ ಸ್ಮಿತ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಕಲ್ಲೆಸೆದು ಹತ್ಯೆಗೈದಿದ್ದಾರೆ. ಅವರು ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಅವರು ಇತ್ತೀಚೆಗೆ ಹಿಂದುಳಿದ ಸಮುದಾಯಕ್ಕೆ ಸೇರಿದ ಮಹೇಶ್ವರಿ ಎಂಬವರನ್ನು ವಿವಾಹವಾಗಿದ್ದರು. ದುಷ್ಕರ್ಮಿಗಳನ್ನು ಮಹೇಶ್ವರಿ ಅವರ ತಂದೆ ಹಾಗೂ ಮಾವ ಎಂದು ಶಂಕಿಸಲಾಗಿದೆ.

ಆ್ಯಡಂ ಸ್ಮಿತ್ ಹಾಗೂ ಮಹೇಶ್ವರಿ ಇಬ್ಬರೂ ನಂದಾವರಂ ಮಂಡಲ್‌ನ ಗುರಜಲಾ ಗ್ರಾಮದ ನಿವಾಸಿಗಳು. ಆಡಂ ಸ್ಮಿತ್ ಹಾಗೂ ಮಹೇಶ್ವರಿ ಅವರು ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮಹೇಶ್ವರಿ ಅವರ ಹೆತ್ತವರು ಮಹೇಶ್ವರಿ ಅವರಿಗೆ ನಿಶ್ಚಯ ನಿಗದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಡಂ ಸ್ಮಿತ್ ಹಾಗೂ ಮಹೇಶ್ವರಿ ಅವರು ನವೆಂಬರ್‌ನಲ್ಲಿ ಹೈದರಾದ್‌ನಲ್ಲಿರುವ ಆರ್ಯ ಸಮಾಜಕ್ಕೆ ತೆರಳಿ ವಿವಾಹವಾಗಿದ್ದರು.

ಬಳಿಕ ದಂಪತಿ ಪೊಲೀಸ್ ರಕ್ಷಣೆಯನ್ನು ಕೋರಿದ್ದರು. ಸಮಾಲೋಚನೆ ಬಳಿಕ ಅವರು ತಮ್ಮ ಕೋರಿಕೆಯನ್ನು ಹಿಂದೆಗೆದಿದ್ದರು. ತಮಗೆ ಅವಮಾನವಾಗಿದೆ. ಆದುದರಿಂದ ದಂಪತಿ ಹಳ್ಳಿ ಪ್ರವೇಶಿಸುವುದು ತಮಗೆ ಇಷ್ಟವಿಲ್ಲ ಎಂದು ಮಹೇಶ್ವರಿ ಅವರ ಕುಟುಂಬ ಸ್ಪಷ್ಟವಾಗಿ ಹೇಳಿದ ಬಳಿಕ ಆಡಂ ಸ್ಮಿತ್ ಹಾಗೂ ಮಹೇಶ್ವರಿ ಅವರು ಅದೋನಿಯ ವಿಟ್ಟಕೃಷ್ಟಪ್ಪ ಕಾಲನಿಯಲ್ಲಿ ವಾಸಿಸುತ್ತಿದ್ದರು.

ಪತಿಯ ಹತ್ಯೆಯ ಹಿನ್ನೆಲೆಯಲ್ಲಿ ಪತ್ನಿ ಮಹೇಶ್ವರಿ ಅವರು ತನ್ನ ತಂದೆ ಚೆನ್ನ ವೀರಣ್ಣ ಹಾಗೂ ಮಾವ ಪೆದ್ದ ವೀರಣ್ಣ ತನ್ನ ಪತಿಯನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಹಾಗೂ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News