ಹತರಾದವರು ಅಮಾಯಕರಲ್ಲ: ಪೊಲೀಸರ ಹೇಳಿಕೆ

Update: 2021-01-01 18:09 GMT

ಶ್ರೀನಗರ, ಜ.1: ಶ್ರೀನಗರದ ಹೊರವಲಯದಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಬಲಿಯಾದವರು ಅಮಾಯಕ ಯುವಕರು, ಭಯೋತ್ಪಾದಕರಲ್ಲ ಎಂಬ ಹೇಳಿಕೆಯನ್ನು ಜಮ್ಮುಕಾಶ್ಮೀರ ಪೊಲೀಸರು ನಿರಾಕರಿಸಿದ್ದಾರೆ.

ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಝುಬೇರ್ ಅಹ್ಮದ್, ಇಜಾಝ್ ಮಕ್ಬೂಲ್(ಪದವಿ ವಿದ್ಯಾರ್ಥಿ) ಮತ್ತು ಅಥರ್ ಮುಷ್ತಾಕ್(ಪ್ರಥಮ ಪಿಯುಸಿ ವಿದ್ಯಾರ್ಥಿ) ಎಂಬ ಯುವಕರು ಮೃತಪಟ್ಟಿದ್ದರು. ಮೃತಪಟ್ಟವರು ಭಯೋತ್ಪಾದಕರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇಜಾಝ್ ಮತ್ತು ಅಥರ್ ಅವರ ಮೊಬೈಲ್ ಫೋನ್‌ನ ದತ್ತಾಂಶಗಳನ್ನು ಪರಿಶೀಲಿಸಿದಾಗ ಇವರಿಬ್ಬರು ಹೈಪರ್‌ಪೋರಾಕ್ಕೆ ತೆರಳಿ ಅಲ್ಲಿಂದ ಎನ್‌ಕೌಂಟರ್ ನಡೆದ ಸ್ಥಳಕ್ಕೆ ಹೋಗಿರುವ ಮಾಹಿತಿಯಿದೆ. ಮತ್ತೊಬ್ಬ ಮೃತ ಯುವಕ ಝುಬೇರ್ ಪುಲ್ವಾಮ, ಅನಂತನಾಗ್‌ನಿಂದ ಶೋಫಿಯಾನ್ ಮೂಲಕ ಎನ್‌ಕೌಂಟರ್ ನಡೆದ ಸ್ಥಳ ತಲುಪಿದ್ದಾನೆ. ಇಜಾಝ್ ಮತ್ತು ಅಥರ್ ಉಗ್ರರ ಸಂಚಾರಕ್ಕೆ ವಾಹನ ಹಾಗೂ ಇತರ ನೆರವು ನೀಡಿರುವ ಮಾಹಿತಿಯೂ ಲಭಿಸಿದೆ. ಇಬ್ಬರೂ ಉಗ್ರಗಾಮಿಗಳ ಪರ ಒಲವು ಹೊಂದಿದ್ದು ಎಲ್‌ಇಟಿ(ಈಗ ಟಿಆರ್‌ಎಫ್ ಎಂದು ಹೆಸರು ಬದಲಿಸಿದೆ) ಭಯೋತ್ಪಾದಕ ಸಂಘಟನೆಯ ಸದಸ್ಯರಿಗೆ ನೆರವು ನೀಡುತ್ತಿದ್ದರು . ಇಜಾಝ್ ಕಳೆದ ಜೂನ್‌ನಲ್ಲಿ ಎನ್‌ಕೌಂಟರ್‌ಗೆ ಬಲಿಯಾದ ಎಲ್‌ಇಟಿ ಉಗ್ರ ಫೈಸಲ್ ಮುಷ್ತಾಕ್ ಬಾಬಾನ ನಿಕಟವರ್ತಿಯಾಗಿದ್ದ . ಶ್ರೀನಗರ ಹೊರವಲಯದಲ್ಲಿ ಉಗ್ರರ ಇರುವಿಕೆಯ ಮಾಹಿತಿಯಂತೆ ಭದ್ರತಾ ಪಡೆಗಳು ಅಲ್ಲಿಗೆ ತೆರಳಿ ಆ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಉಗ್ರರು ಗುಂಡು ಹಾರಿಸಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿದಾಗ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.

ಆದರೂ, ಈ ಪ್ರಕರಣವನ್ನು ವಿವಿಧ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದವರು ಹೇಳಿದ್ದಾರೆ. ಈ ಮಧ್ಯೆ, ಇಜಾಝ್ ವಿಶ್ವವಿದ್ಯಾನಿಲಯಕ್ಕೆ ತೆರಳುತ್ತಿದ್ದಾಗ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ ಎಂದು ಆತನ ಪೋಷಕರು ಆರೋಪಿಸಿದ್ದಾರೆ. ಅಂತ್ಯಸಂಸ್ಕಾರವನ್ನು ಸೂಕ್ತ ರೀತಿಯಲ್ಲಿ ನಡೆಸಲು ಮೃತದೇಹಗಳನ್ನು ಹಸ್ತಾಂತರಿಸುವಂತೆ ಮೃತ ಯುವಕರ ಕುಟುಂಬಸ್ಥರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News