ಕಳವಾದ ಕಾರನ್ನು ಎರಡು ವರ್ಷಗಳಿಂದ ಬಳಸುತ್ತಿದ್ದ ಉ.ಪ್ರ. ಪೊಲೀಸ್ ಅಧಿಕಾರಿ!

Update: 2021-01-02 17:34 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಡಿ.2: ಎರಡು ವರ್ಷಗಳ ಹಿಂದೆ ಕಳವಾದ ಕಾರಿನ ಮಾಲಕ ಓಮೇಂದ್ರ ಸೋನಿ ಅವರಿಗೆ, ವಾಹನ ಸರ್ವೀಸ್ ಸೆಂಟರ್‌ನವರು ಕರೆ ಮಾಡಿ, ನಿಮ್ಮ ಕಾರು ಚೆನ್ನಾಗಿ ಓಡುತ್ತಿದೆಯೇ ಎಂದು ಕೇಳಿದಾಗ ನಂಬಲು ಸಾಧ್ಯವೇ ಆಗಲಿಲ್ಲ. ಆ ಕಾರನ್ನು ಸರ್ವೀಸ್ ಮಾಡಿದ ಬಳಿಕ ಬಿಥೂರ್ ಪೊಲೀಸ್ ಠಾಣೆಯ ಅಧಿಕಾರಿ ಕೌಶಲೇಂದ್ರ ಪ್ರತಾಪ್‌ಸಿಂಗ್ ಅವರಿಗೆ ಮರಳಿಸಲಾಗಿದೆಯೆಂದು ಸರ್ವೀಸ್ ಸೆಂಟರ್‌ನವರು ತಿಳಿಸಿದಾಗ, ಆತನಿಗೆ ಇನ್ನಷ್ಟು ಆಶ್ಚರ್ಯವಾಯಿತು.

ಕಳೆದ ವರ್ಷದ ಜುಲೈ 3ರಂದು ಉತ್ತರಪ್ರದೇಶದ ಬಿಕ್ರುವಿನಲ್ಲಿ 8 ಮಂದಿ ಪೊಲೀಸರನ್ನು ಗ್ಯಾಂಗ್‌ಸ್ಟರ್ ವಿಕಾಸ್ ದುಬೆನ ಅನುಚರರು ಹತ್ಯೆಗೈದಿದ್ದರು. ಈ ಘಟನೆಯಲ್ಲಿ ಗಾಯಗೊಂಡಿದ್ದ ಇತರ ಎಂಟು ಮಂದಿ ಪೊಲೀಸರಲ್ಲಿ ಕೌಶಲೇಂದ್ರ್ಲ ಪ್ರತಾಪ್‌ಸಿಂಗ್ ಒಬ್ಬರಾಗಿದ್ದರು.

ಓಮೇಂದ್ರ ಸೋನಿ ಅವರ ಕಳವಾದ ಕಾರನ್ನು ಕೌಶಲೇಂದ್ರ ಪ್ರತಾಪ್ ಸಿಂಗ್ ಕಳೆದ ಎರಡು ವರ್ಷಗಳಿಂದ ಉಪಯೋಗಿಸುತ್ತಿದ್ದರೆನ್ನಲಾಗಿದೆ. ಆದರೆ ಈ ಅವಧಿಯಲ್ಲಿ ಅವರು ಕಾರನ್ನು ಯಾವತ್ತೂ ಸರ್ವೀಸ್‌ಗೆ ನೀಡಿರಲಿಲ್ಲ

ಓಮೇಂದ್ರ ಸೋನಿ ಅವರ ಕಾರು 2018ರ ಡಿಸೆಂಬರ್ 31ರಂದು ಬಾರಾ ಎಂಬಲ್ಲಿರುವ ಕಾರ್ ವಾಶಿಂಗ್ ಸೆಂಟರ್‌ನಿಂದ ಕಳವಾಗಿತ್ತು. ಈ ಬಗ್ಗೆ ಅವರು ಬಾರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಬುಧವಾರದಂದು ಅವರಿಗೆ ಕೆಟಿಎಲ್ ಸರ್ವಿಸ್ ಕೇಂದ್ರದವರು ಕರೆ ಮಾಡಿ, ತಮ್ಮ ವಾಹನ ಸರ್ವೀಸ್ ಮಾಡಿದ ಬಳಿಕ ಚೆನ್ನಾಗಿ ಓಡುತ್ತಿದೆಯೇ ಎಂದು ಕೇಳಿದ್ದರು.

‘‘ಅವರ ಪ್ರಶ್ನೆ ಕೇಳಿ ನನಗೆ ಆಚ್ಚರಿಯಾಯಿತು. ತನ್ನ ವ್ಯಾಗನ್‌ಆರ್ ಕಾರಿನ ಸರ್ವೀಸಿಂಗ್ ಅಲ್ಲಿ ಮಾಡಿಸಿದ್ದರಿಂದ ನನ್ನ ಕುರಿತಾದ ವಿವರಗಳು ಅವರ ಬಳಿ ಯಿದ್ದವು. ಈ ಹಿನ್ನೆಲೆಯಲ್ಲಿ ಅವರು ಕಾರಿನ ಕಾರ್ಯಕ್ಷಮತೆಯ ಬಗ್ಗೆ ವಿಚಾರಿಸಲು ಕರೆ ಮಾಡಿದ್ದರು ಎಂದು ಓಮೇಂದ್ರ ಸೋನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆನಂತರ ಕೂಡಲೇ ತಾನು ಸರ್ವಿಸ್ ಸೆಂಟರ್‌ಗೆ ಧಾವಿಸಿ, ಆ ಬಗ್ಗೆ ವಿಚಾರಿಸಿದೆ. ಆಗ ಅವರು ಕಾರು ಸರ್ವೀಸ್ ಬಳಿಕ ಡಿಸೆಂಬರ್ 22ರಂದು ಬೈತೂರ್ ಪೊಲೀಸ್ ಠಾಣಾಧಿಕಾರಿ ಕೌಶಲೇಂದ್ರ ಪ್ರತಾಪ್ ಅವರಿಗೆ ಮರಳಿಸಿದ್ದಾಗಿ ತಿಳಿಸಿದರು. ಕಳವಾದ ತನ್ನ ಕಾರನ್ನು ಪತ್ತೆ ಹಚ್ಚಿದ ಬಳಿಕವೂ ಪೊಲೀಸರು ಯಾಕೆ ತನಗೆ ಮಾಹಿತಿ ನೀಡಲಿಲ್ಲವೆಂದು ಓಮೇಂದ್ರ ಸೋನಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತೊರೆದುಹೋದಂತಹ ಸ್ಥಿತಿಯಲ್ಲಿದ್ದ ಕಾರೊಂದು ತಾನು ಪತ್ತೆಹಚ್ಚಿದ್ದಾಗಿಯೂ, ಆನಂತರ ಅದನ್ನು ವಶಪಡಿಸಿಕೊಳ್ಳಲಾಯಿತೆಂದು ಕೌಶಲೇಂದ್ರ ಪ್ರತಾಪ್ ಹೇಳಿದ್ದಾರೆ. ಆದರೆ ಆ ವಾಹನವು ಯಾವಾಗ ಪತ್ತೆಯಾಯಿತೆಂಬುದನ್ನು ಅವರು ಯಾವುದೇ ವಿವರಣೆ ನೀಡಿಲ್ಲ.

ವಶಪಡಿಸಿಕೊಳ್ಳಲಾದ ಕಾರನ್ನು ಬಸಲು ಅನುಮತಿಯಿಲ್ಲದಿರುವಾಗ ಪೊಲೀಸ್ ಅಧಿಕಾರಿ ಅದನ್ನು ಉಪಯೋಗಿಸುವುದು ಹೇಗೆ ಸಾಧ್ಯವೆಂಬ ಪತ್ರಕರ್ತರ ಪ್ರಶ್ನೆಗೆ ಕೌಶಲೇಂದ್ರ ಪ್ರತಾಪ್ ಅವರು ಉತ್ತರಿಸಿಲ್ಲ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉನ್ನತ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ವಶಪಡಿಸಿಕೊಳ್ಳಲಾದ ವಾಹನವನ್ನು ಬಳಸಿಕೊಳ್ಳುವುದು ಕಾನೂನು ಬಾಹಿರವೆಂದು ಕಾನ್ಪುರ ವಲಯದ ಪೊಲೀಸ್ ಮಹಾನಿರೀಕ್ಷಕ ಮೋಹಿತ್ ಅಗರ್ವಾಲ್ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಗಂಭೀರವಾದ ಇಲಾಖಾ ಮಟ್ಟದ ಕ್ರಮವನ್ನು ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News