ಬಲವಂತವಾಗಿ ಮಹಿಳೆಯ ಮತಾಂತರ ಮಾಡಿದ್ದಾರೆಂದು ಅಮಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದ ಉತ್ತರಪ್ರದೇಶ ಪೊಲೀಸ್

Update: 2021-01-03 17:44 GMT

ಬರೇಲಿ (ಉತ್ತರಪ್ರದೇಶ), ಜ. 3: ಉತ್ತರಪ್ರದೇಶದ ಜಿಲ್ಲೆಯೊಂದರಲ್ಲಿ 24 ವರ್ಷದ ಮಹಿಳೆಯನ್ನು ಬಲವಂತವಾಗಿ ಮತಾಂತರಗೊಳಿಸಿದ ಆರೋಪದಲ್ಲಿ ಮೂವರು ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಿದ ಎರಡು ದಿನಗಳ ಬಳಿಕ ಪೊಲೀಸರು ರವಿವಾರ, ತಾವು ತಪ್ಪಾಗಿ ಪ್ರಕರಣ ದಾಖಲಿಸಿಕೊಂಡಿದ್ದೆವು ಎಂದಿದ್ದಾರೆ.

‘‘2020 ಸೆಪ್ಟಂಬರ್ 9ರಂದು ಮಹಿಳೆ ಅಬ್ರಾರ್ ಎಂಬ ಹೆಸರಿನ ವ್ಯಕ್ತಿಯೊಂದಿಗೆ ಮನೆ ತ್ಯಜಿಸಿದ್ದಳು. ತರುವಾಯ ಫರೀದ್‌ಪುರ ಪೊಲೀಸ್ ಠಾಣೆಯಲ್ಲಿ ಅಪಹರಣದ ದೂರು ದಾಖಲಿಸಲಾಗಿತ್ತು. ಮಹಿಳೆ ದಿಲ್ಲಿಯ ತುಘ್ಲಕ್‌ಪುರದಲ್ಲಿ ಸುಮಾರು 15 ದಿನಗಳ ಕಾಲ ಅಬ್ರಾರ್‌ನೊಂದಿಗೆ ವಾಸಿಸಿ ಬಳಿಕ ಮನೆಗೆ ಹಿಂದಿರುಗಿದ್ದರು’’ ಎಂದು ಬರೇಲಿಯ ಹಿರಿಯ ಪೊಲೀಸ್ ಅಧೀಕ್ಷಕ ರೋಹಿತ್ ಸಿಂಗ್ ಸಾಜ್ವಾನ್ ತಿಳಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಜನವರಿ 1ರಂದು ಮೂವರು ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

‘‘ದೂರಿನ ಪ್ರಕಾರ, ಕಳೆದ ವರ್ಷ ಡಿಸೆಂಬರ್ 1ರಂದು ಮಹಿಳೆ ಫರೀದ್‌ಪುರದಲ್ಲಿರುವ ಮನೆಗೆ ಹಿಂದಿರುಗಿದಾಗ ಅಬ್ರಾರ್ ಹಾಗೂ ಸೋದರ ಸಂಬಂಧಿಗಳಾದ ಮೈಸರ್ ಹಾಗೂ ಇರ್ಶಾದ್ ಮಹಿಳೆಯನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದಾರೆ. ಆದರೆ, ಅಂದು ಆರೋಪಿಗಳು ಆ ಸ್ಥಳದಲ್ಲಿ ಇರಲಿಲ್ಲ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರು ಸಂಗ್ರಹಿಸಿದ ಪುರಾವೆಗಳ ಪ್ರಕಾರ, ಮೂವರು ಮುಸ್ಲಿಮರ ವಿರುದ್ಧ ಮಹಿಳೆ ಹಾಗೂ ಆಕೆಯ ಮಾವ ಮಾಡಿದ ಆರೋಪ ಸುಳ್ಳು. ಆದುದರಿಂದ ಕಾನೂನಿನ ನಿಬಂಧನೆಗೆ ಅನುಗುಣವಾಗಿ ಈ ಪ್ರಕರಣವನ್ನು ವಜಾಗೊಳಿಸಲಾಗುತ್ತದೆ’’ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.

ಆದರೆ, ಮಾವನ ಮನೆಗೆ ಆಗಮಿಸಿದ ಅಬ್ರಾರ್ ಬೆದರಿಕೆ ಒಡ್ಡಿರುವುದಾಗಿ ಮಹಿಳೆ ಮಾಡಿದ ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ‘‘ಡಿಸೆಂಬರ್ 11ರಂದು ಮಹಿಳೆಯ ಮಾವ ಜಿಲ್ಲೆಯ ಅಲೋನಾ ಪ್ರದೇಶದಲ್ಲಿ ಆಕೆಯನ್ನು ವಿವಾಹವಾಗಿದ್ದರು. ಈ ಸಂದರ್ಭ ಅಬ್ರಾರ್ ಮಹಿಳೆಯ ಮಾವನ ಮನೆಗೆ ತೆರಳಿದ್ದ ಹಾಗೂ ‘‘ಕೂಡಲೇ ಫರೀದ್‌ಪುರಕ್ಕೆ ಹಿಂದಿರುಗು. ಇಲ್ಲದೇ ಇದ್ದರೆ, ಪರಿಣಾಮ ಎದುರಿಸಬೇಕಾದೀತು ಎಂದು ಮಹಿಳೆಗೆ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪ ಸತ್ಯವೆಂದು ಸಾಬೀತಾದರೆ, ಅಬ್ರಾರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’’ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News