ರಾಜಸ್ಥಾನದಲ್ಲಿ ಹಕ್ಕಿ ಜ್ವರ: 250ಕ್ಕೂ ಅಧಿಕ ಕಾಗೆಗಳು ಸಾವು

Update: 2021-01-04 16:49 GMT
ಸಾಂದರ್ಭಿಕ ಚಿತ್ರ

ಜೈಪುರ, ಜ. 4: ರಾಜಸ್ಥಾನದಲ್ಲಿ 250ಕ್ಕೂ ಅಧಿಕ ಕಾಗೆಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಕ್ಕಿ ಜ್ವರದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಝಲ್ವಾರ್ ಜಿಲ್ಲೆ ಹಾಗೂ ಜೈಪುರ ಸೇರಿದಂತೆ ಇತರ ಹಲವು ನಗರಗಳಲ್ಲಿ ಸಾವನ್ನಪ್ಪಿದ ಕಾಗೆಗಳಲ್ಲಿ ಅಪಾಯಕಾರಿ ವೈರಸ್ ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ರಾಜಧಾನಿ ಜೈಪುರದಿಂದ 340 ಕಿ.ಮೀ. ದೂರದಲ್ಲಿರುವ ಝಲ್ವಾರ್‌ನಲ್ಲಿ ಡಿಸೆಂಬರ್ 25ರಿಂದ ಹಕ್ಕಿಗಳ ಸಾವು ಸಂಭವಿಸಲು ಆರಂಭವಾಗಿದೆ. ಕಾಗೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿವೆ. ಕೋಟಾ ಹಾಗೂ ಜೋಧಪುರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಗೆಗಳು ಸಾವನ್ನಪ್ಪಿವೆ. ರಾಜಧಾನಿಯ ಜಲಮಹಲ್‌ನಲ್ಲಿ ರವಿವಾರ 7 ಕಾಗೆಗಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಇದರೊಂದಿಗೆ ರಾಜ್ಯದಲ್ಲಿ ಸತ್ತ ಒಟ್ಟು ಕಾಗೆಗಳ ಸಂಖ್ಯೆ 252ಕ್ಕೆ ಏರಿಕೆಯಾಗಿದೆ.

ಇದುವರೆಗೆ ಝಲ್ವಾರ್‌ನಲ್ಲಿ 100, ಬರಾನ್‌ನಲ್ಲಿ 72, ಕೋಟಾದಲ್ಲಿ 47, ಪಾಲಿಯಲ್ಲಿ 19 ಹಾಗೂ ಜೋಧಪುರ ಹಾಗೂ ಜೈಪುರದಲ್ಲಿ ತಲಾ 7 ಕಾಗೆಗಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಭೋಪಾಲದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್‌ಗೆ ಕಳುಹಿಸಲಾದ ಮಾದರಿಯಲ್ಲಿ ಅಪಾಯಕಾರಿ ವೈರಸ್ ಪತ್ತೆಯಾಗಿತ್ತು. ಝಲ್ವಾರ್‌ಗೆ ತಂಡವೊಂದನ್ನು ಕಳುಹಿಸಿ ಕೊಡಲಾಗಿದೆ. ಜಿಲ್ಲೆಯ ಬಾಲಾಜಿ ಪ್ರದೇಶ 1 ಕಿ.ಮೀ. ವ್ಯಾಪ್ತಿಯನ್ನು ಸುತ್ತುವರಿಯಲಾಗಿದೆ ಹಾಗೂ ನಿಷೇಧಾಜ್ಞೆ ಹೇರಲಾಗಿದೆ. ಸತ್ತ ಹಕ್ಕಿಗಳನ್ನು ಈ ಪ್ರದೇಶದಲ್ಲಿ ಗುಂಡಿ ತೆಗೆದು ಸುರಕ್ಷಿತವಾಗಿ ಹೂಳಲಾಗಿದೆ. ಅಲ್ಲದೆ, ಸ್ಯಾನಿಟೈಸ್ ಮಾಡಲಾಗಿದೆ. ಪರಿಸ್ಥಿತಿ ಅವಲೋಕಿಸಲು ಅಜ್ಮೀರ್ ಹಾಗೂ ಭರತ್‌ಪುರಕ್ಕೆ ವಿಶೇಷ ತಂಡ ಕಳುಹಿಸಿ ಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News