ಎಚ್-1ಬಿ ವೀಸಾ ನಿರ್ಬಂಧ ತೆರವುಗೊಳಿಸಿ

Update: 2021-01-06 15:35 GMT

ವಾಶಿಂಗ್ಟನ್, ಜ. 6: ಅಮೆರಿಕದಲ್ಲಿ ಹೆಚ್ಚುತ್ತಿರುವ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗಾಗಿನ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಎಚ್-1ಬಿ ವೀಸಾಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಹಾಗೂ ವಿಜ್ಞಾನ ಮತ್ತು ಗಣಿತ ಪದವಿಗಳನ್ನು ಹೊಂದಿರುವ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಗ್ರೀನ್ ಕಾರ್ಡ್‌ಗಳನ್ನು ನೀಡುವಂತೆ ಭಾರತೀಯ-ಅಮೆರಿಕನ್ ಉದ್ಯಮ ಗುಂಪೊಂದು ಮುಂಬರುವ ಬೈಡನ್ ಆಡಳಿತವನ್ನು ಒತ್ತಾಯಿಸಿದೆ.

ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಸೇರಿದಂತೆ ಅತ್ಯುನ್ನತ ಕೌಶಲ ಹೊಂದಿರುವ ವಿದೇಶೀಯರಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಎಚ್-1ಬಿ ಉದ್ಯೋಗ ವೀಸಾವನ್ನು ನೀಡಲಾಗುತ್ತದೆ. ಗ್ರೀನ್ ಕಾರ್ಡ್‌ಗಳು ವಿದೇಶೀಯರಿಗೆ ಅಮೆರಿಕದಲ್ಲಿ ಶಾಶ್ವತವಾಗಿ ವಾಸ ಮಾಡುವ ಹಕ್ಕನ್ನು ನೀಡುತ್ತದೆ.

ಎಚ್-1ಬಿ ಸೇರಿದಂತೆ ವಿದೇಶಗಳಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ಉದ್ಯೋಗ ವೀಸಾಗಳ ವಿತರಣೆಯ ಮೇಲಿನ ನಿಷೇಧವನ್ನು ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡಿಸೆಂಬರ್ 31ರಂದು ಇನ್ನೂ ಮೂರು ತಿಂಗಳ ಕಾಲ, ಅಂದರೆ ಮಾರ್ಚ್ 31ರವರೆಗೆ ವಿಸ್ತರಿಸಿದ್ದಾರೆ. ಇದು ಭಾರೀ ಸಂಖ್ಯೆಯ ಭಾರತೀಯ ಮಾಹಿತಿ ತಂತ್ರಜ್ಞಾನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಎಚ್-1ಬಿ ವೀಸಾಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವ ಭರವಸೆಯನ್ನು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಈಗಾಗಲೇ ನೀಡಿದ್ದಾರೆ. ಟ್ರಂಪ್‌ರ ವಲಸೆ ನೀತಿಗಳು ಕ್ರೂರ ಎಂದು ಅವರು ಬಣ್ಣಿಸಿದ್ದಾರೆ.

‘‘ಇದು ಹೆಚ್ಚಾಗಿ ಶಾಸಕಾಂಗಕ್ಕೆ ಸಂಬಂಧಪಟ್ಟ ವಿಷಯ. ನಾವು ಬೈಡನ್ ಆಡಳಿತಕ್ಕೆ ಎರಡು ವಿಷಯಗಳನ್ನು ಶಿಫಾರಸು ಮಾಡಿದ್ದೇವೆ. ಅವುಗಳೆಂದರೆ, ಒಂದು, ಎಚ್-1ಬಿ ವೀಸಾ ಮೇಲಿನ ನಿರ್ಬಂಧವನ್ನು ತೆರವುಗೊಳಿಸಬೇಕು ಹಾಗೂ, ಎರಡು, ನಮ್ಮ ದೇಶದ ಆರ್ಥಿಕತೆಗೆ ದೇಣಿಗೆ ನೀಡುವುದಕ್ಕಾಗಿ ಇಲ್ಲೇ ವಾಸಿಸಲು ಸಾಧ್ಯವಾಗುವಂತೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಜ್ಞಾನಿಗಳಿಗೆ ಗ್ರೀನ್ ಕಾರ್ಡ್ ವಿತರಿಸಬೇಕು’’ ಎಂದು ಯುಸ್-ಇಂಡಿಯ ಸ್ಟ್ರಾಟಜಿಕ್ ಆ್ಯಂಡ್ ಪಾರ್ಟ್‌ನರ್‌ಶಿಪ್ ಫೋರಮ್ ಅಧ್ಯಕ್ಷ ಮುಕೇಶ್ ಅಘಿ ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News