ಕೋವಿಡ್ ಪ್ರಕರಣಗಳಲ್ಲಿ ಏರಿಕೆ: ಕಟ್ಟೆಚ್ಚರ ವಹಿಸುವಂತೆ ನಾಲ್ಕು ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

Update: 2021-01-07 17:32 GMT

ಹೊಸದಿಲ್ಲಿ.ಜ.7: ಮಹಾರಾಷ್ಟ್ರ, ಕೇರಳ, ಛತ್ತೀಸ್‌ಗಡ ಮತ್ತು ಪ.ಬಂಗಾಳಗಳಲ್ಲಿ ಕೊರೋನ ವೈರಸ್ ಪ್ರಕರಣಗಳಲ್ಲಿ ಇತ್ತೀಚಿನ ಏರಿಕೆಯನ್ನು ತಡೆಯಲು ಕಟ್ಟೆಚ್ಚರ ವಹಿಸುವಂತೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರವು ಈ ರಾಜ್ಯಗಳ ಸರಕಾರಗಳಿಗೆ ಎಚ್ಚರಿಕೆ ನೀಡಿದೆ. ದೇಶದಲ್ಲಿಯ ಒಟ್ಟು ಸಕ್ರಿಯ ಕೋವಿಡ್ ಪ್ರಕರಣಗಳ ಪೈಕಿ ಶೇ.59ರಷ್ಟು ಈ ನಾಲ್ಕು ರಾಜ್ಯಗಳಲ್ಲಿ ದಾಖಲಾಗಿವೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ,ರೂಪಾಂತರಿತ ಕೊರೋನವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ಪರೀಕ್ಷೆಗಳ ಪ್ರಮಾಣವನ್ನು ತಗ್ಗಿಸುವುದರ ವಿರುದ್ಧವೂ ಎಚ್ಚರಿಕೆಯನ್ನು ನೀಡಲಾಗಿದೆ. ಇತರ ರಾಜ್ಯಗಳು ಅಳವಡಿಸಿಕೊಂಡಿರುವ ‘ಟೆಸ್ಟ್-ಟ್ರಾಕ್-ಟ್ರೀಟ್’ ಕಾರ್ಯತಂತ್ರ ವನ್ನು ಅನುಸರಿಸುವಂತೆಯೂ ಈ ರಾಜ್ಯಗಳಿಗೆ ಸೂಚಿಸಲಾಗಿದೆ.

ಮಾಸ್ಕ್ ಧರಿಸುವಂತೆ,ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಮತ್ತು ಇತರ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸುವಂತೆ ಜನತೆಯನ್ನು ಆಗ್ರಹಿಸುವಂತೆಯೂ ಭೂಷಣ್ ರಾಜ್ಯಗಳ ಅಧಿಕಾರಿಗಳಿಗೆ ನೆನಪಿಸಿದ್ದಾರೆ.

ಮಹಾರಾಷ್ಟ್ರ ದೇಶದಲ್ಲಿ ಅತ್ಯಂತ ಪೀಡಿತ ರಾಜ್ಯವಾಗಿ ಮುಂದುವರಿದಿದ್ದು,ಸುಮಾರು 52,000 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಸೋಂಕಿನಿಂದಾಗಿ ಈವರೆಗೆ ಸುಮಾರು 50,000 ಜನರು ಮೃತಪಟ್ಟಿದ್ದಾರೆ. ಛತ್ತೀಸ್‌ಗಡ ಮತ್ತು ಪ.ಬಂಗಾಳಗಳಲ್ಲಿ ತಲಾ 9,000 ಸಕ್ರಿಯ ಪ್ರಕರಣಗಳಿವೆ. ಪ.ಬಂಗಾಳದಲ್ಲಿ ಈವರೆಗೆ ಸುಮಾರು 10,000 ಜನರು ಮೃತಪಟ್ಟಿದ್ದು,ಛತ್ತೀಸ್‌ಗಡದಲ್ಲಿ ಸುಮಾರು 3,500 ಸಾವುಗಳು ಸಂಭವಿಸಿವೆ. ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 65,000ಕ್ಕೇರಿದೆ. ಈ ರಾಜ್ಯದಲ್ಲಿ ಈವರೆಗೆ ರೂಪಾಂತರಿತ ಕೊರೋನವೈರಸ್ ಸೋಂಕಿನ ಆರು ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News