ಜಾರ್ಖಂಡ್: 50ರ ಹರೆಯದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ದುಷ್ಕರ್ಮಿಗಳು
ರಾಂಚಿ,ಜ.9: ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ದೇವಸ್ಥಾನವೊಂದರಲ್ಲಿ ಅರ್ಚಕ ಸೇರಿದಂತೆ ಮೂವರು 50ರ ಹರೆಯದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ ಬೆನ್ನಲ್ಲೇ ಜಾರ್ಖಂಡ್ನ ಚತರಾ ಜಿಲ್ಲೆಯಲ್ಲಿ ನಿರ್ಭಯಾ ಮಾದರಿಯ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ ಎಂದು scroll.in ತನ್ನ ವರದಿಯಲ್ಲಿ ತಿಳಿಸಿದೆ.
ಆರೋಪಿಗಳು 50ರ ಹರೆಯದ ಮಹಿಳೆಯ ಮರ್ಮಾಂಗದಲ್ಲಿ ಲೋಹದ ವಸ್ತುವನ್ನು ತೂರಿಸಿ ಕ್ರೌರ್ಯವನ್ನು ಮೆರೆದಿದ್ದು,ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಬಿಹಾರದ ಗಯಾ ಜಿಲ್ಲೆಯ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚತರಾ ಜಿಲ್ಲೆಯ ಕೊಬ್ನಾ ಗ್ರಾಮದಲ್ಲಿ ಗುರುವಾರ ತಡರಾತ್ರಿ ಈ ಹೇಯ ಘಟನೆ ನಡೆದಿದೆ. ರಾತ್ರಿ ಹತ್ತು ಗಂಟೆಯ ಸುಮಾರಿಗೆ ಮಹಿಳೆ ಮನೆಯಿಂದ ಹೊರಗೆ ಬಂದಿದ್ದಾಗ ಆರೋಪಿಗಳು ಆಕೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮಹಿಳೆಯ ಮೇಲೆ ದಾಳಿ ನಡೆಸುವ ಮುನ್ನ ಆರೋಪಿಗಳು ಆಕೆಯೊಂದಿಗೆ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ.
‘ಶುಕ್ರವಾರ ಬೆಳಿಗ್ಗೆ ನಮಗೆ ಘಟನೆಯ ಬಗ್ಗೆ ಮಾಹಿತಿ ಲಭಿಸಿದ್ದು,ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ತಲೆಮರೆಸಿಕೊಂಡಿರುವ ಇನ್ನೋರ್ವನನ್ನು ಶೀಘ್ರ ಬಂಧಿಸಲಾಗುವುದು ’ ಎಂದು ಹಝಾರಿಬಾಗ್ ವಲಯ ಡಿಐಜಿ ಅಮೋಲ್ ಹೋಮ್ಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.