ನೆತನ್ಯಾಹು ರಾಜೀನಾಮೆ ಆಗ್ರಹಿಸಿ ಇಸ್ರೇಲ್‌ನಲ್ಲಿ ಬೃಹತ್ ಪ್ರತಿಭಟನೆ

Update: 2021-01-10 17:07 GMT

ಜೆರುಸಲೇಂ,ಜ.10: ಭ್ರಷ್ಟಾಚಾರದ ಆರೋಪಗಳು ಎದುರಿಸುತ್ತಿರುವುದಕ್ಕಾಗಿ ಹಾಗೂ ಕೋವಿಡ್-19 ಸಾಂಕ್ರಾಮಿಕದ ಹಾವಳಿಯನ್ನು ನಿಭಾಯಿಸುವಲ್ಲಿ ವಿಫಲರಾಗಿರುವುದಕ್ಕಾಗಿ ಇಸ್ರೇಲ್ ಪ್ರಧಾನಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅವರ ನಿವಾಸದ ಮುಂದೆ ರವಿವಾರ ಸಾವಿರಾರು ಮಂದಿ ಇಸ್ರೇಲಿ ನಾಗರಿಕರು  ಪ್ರತಿಭಟನೆ ನಡೆಸಿದರು.

ರೂಪಾಂತರಿ ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ರಾಷ್ಟ್ರವ್ಯಾಪಿಯಾಗಿ ಮೂರನೇ ಬಾರಿ ಲಾಕ್‌ಡೌನ್ ಹೇರಿರುವ ನಡುವೆಯೇ ಈ ಪ್ರತಿಭಟನೆ ನಡೆದಿದೆ. ಲಂಚ ಸ್ವೀಕಾರದ ಆರೋಪ ಎದುರಿಸುತ್ತಿರುವ ನೆತನ್ಯಾಹು ವಿರುದ್ಧ ಈ ವಾರ ವಿಚಾರಣೆ ಆರಂಭಗೊಳ್ಳಬೇಕಿತ್ತು. ಆದರೆ ಕೋವಿಡ್-19 ಲಾಕ್‌ಡೌನ್ ಹೇರಲಾಗಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂ ಡಲಾಗಿದೆ.

   ಲಂಚ ಸ್ವೀಕಾರ, ವಂಚನೆ ಹಾಗೂ ವಿಶ್ವಾಸ ಉಲ್ಲಂಘನೆಯ ಆರೋಪಗಳಿಗೆ ಸಂಬಂಧಿಸಿ ಮೂರು ಪ್ರಕರಣಗಳಲ್ಲಿ ನೆತನ್ಯಾಹು ವಿರುದ್ಧ ದೋಷಾರೋಪಣೆ ಹೊರಿಸಲಾಗಿದೆ. ಆದರೆ ತನ್ನ ಮೇಲಿನ ಆರೋಪಗಳನ್ನು ನೆತಾನ್ಯಾಹು ನಿರಾಕರಿಸಿದ್ದಾರೆ. ಕೆಲವು ಮಾಧ್ಯಮಗಳು ದ್ವೇಷಪೂರಿತವಾಗಿ ತನ್ನನ್ನು ‘ಬೇಟೆಯಾಡುತ್ತಿವೆ ’ಎಂದವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News