ಉ.ಪ್ರ. ಆಸ್ಪತ್ರೆ ಬಗ್ಗೆ ಅವಹೇಳನಕಾರಿ ಹೇಳಿಕೆ: ಆಪ್ ಶಾಸಕ ಸೋಮನಾಥ್ ಭಾರ್ತಿ ಬಂಧನ

Update: 2021-01-11 17:32 GMT

ಲಕ್ನೋ, ಜ. 12: ಉತ್ತರಪ್ರದೇಶದ ಆಸ್ಪತ್ರೆಗಳ ಪರಿಸ್ಥಿತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಆಪ್ ಶಾಸಕ ಸೋಮನಾಥ ಭಾರ್ತಿ ಅವರನ್ನು ಪೊಲೀಸರು ಅಮೇಥಿಯಲ್ಲಿ ಸೋಮವಾರ ಬಂಧಿಸಿದ್ದಾರೆ.

 ರಾಯ್ ಬರೇಲಿ ಜಿಲ್ಲೆಗೆ ಭೇಟಿಗೆ ಸಂಬಂಧಿಸಿ ಇಂದು ಬೆಳಗ್ಗೆ ಪೊಲೀಸ್ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸುತ್ತಿರುವ ಸಂದರ್ಭ ಭಾರ್ತಿ ಅವರ ಮೇಲೆ ಯುವಕನೋರ್ವ ಶಾಯಿ ಎರಚಿದ್ದಾನೆ. ಭಾರ್ತಿ ಅವರು ಅಮೇಥಿ ಹಾಗೂ ರಾಯ್‌ಬರೇಲಿಯ ಭೇಟಿಯಲ್ಲಿದ್ದಾರೆ. ರಾಯ್‌ಬರೇಲಿಯಲ್ಲಿರುವ ಶಾಲೆಗೆ ಭೇಟಿ ನೀಡಲು ಪ್ರಯತ್ನಿಸುತ್ತಿರುವ ಸಂದರ್ಭ ಈ ಘಟನೆ ನಡೆದಿದೆ.

ಈ ಹಿನ್ನಲೆಯಲ್ಲಿ ಭಾರ್ತಿ ಹಾಗೂ ಪೊಲೀಸರ ನಡುವೆ ವಾಗ್ವಾದ್ ನಡೆಯಿತು. ರಾಯ್‌ಬರೇಲಿಯ ಹಾಜಾ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಅತುಲ್ ಕುಮಾರ್ ಸಿಂಗ್ ಅವರೊಂದಿಗೆ ವಾಗ್ವಾದ ನಡೆದ ಸಂದರ್ಭ ಭಾರ್ತಿ ಅವರನ್ನು ವಶಕ್ಕೆ ಪಡೆಯಲಾಯಿತು.

ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ನಿಂದನೀಯ ಭಾಷೆ ಬಳಸಿ ‘ಭೀಕರ ಪರಿಣಾಮ ಎದುರಿಸಬೇಕಾದೀತು’ ಎಂದು ಭಾರ್ತಿ ಅವರು ಬೆದರಿಕೆ ಒಡ್ಡಿರುವುದಾಗಿ ಇನ್ಸ್‌ಪೆಕ್ಟರ್ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

ಇದಕ್ಕಿಂತ ಮೊದಲು ಅವರು ಉತ್ತರಪ್ರದೇಶದ ಆಸ್ಪತ್ರೆಗಳ ಸ್ಥಿತಿಗತಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸರಕಾರಿ ಶಾಲೆಗಳ ಪರಿಶೀಲನೆ ನಡೆಸಲು ಭಾರ್ತಿ ಅವರು ರವಿವಾರ ರಾತ್ರಿ ರಾಯ್ ಬರೇಲಿ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News