200 ಸತ್ತ ಹಕ್ಕಿಗಳು ಪತ್ತೆ: ಉತ್ತರಾಖಂಡದಲ್ಲಿ ಹಕ್ಕಿ ಜ್ವರದ ಭೀತಿ
ಡೆಹ್ರಾಡೂನ್, ಜ. 12: ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರದ ಭೀತಿಯ ನಡುವೆ ಉತ್ತರಾಖಂಡದ ಡೆಹ್ರಾಡೂನ್ ಹಾಗೂ ಋಷಿಕೇಶ್‌ನಲ್ಲಿ ಅತ್ಯಧಿಕ ಕಾಗೆಗಳು ಸೇರಿದಂತೆ ಸುಮಾರು 200 ಹಕ್ಕಿಗಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭಂಡಾರಿ ಬಾಘ್ ಪ್ರದೇಶವೊಂದರಲ್ಲೇ 121 ಕಾಗೆಗಳು ಸೇರಿದಂತೆ ಡೆಹ್ರಾಡೂನ್‌ನ ವಿವಿಧ ಭಾಗಗಳಲ್ಲಿ ರವಿವಾರ ಒಟ್ಟು 165 ಹಕ್ಕಿಗಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡೆಹ್ರಾಡೂನ್‌ನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಹಕ್ಕಿಗಳಲ್ಲಿ 162 ಕಾಗೆಗಳು, 2 ಪಾರಿವಾಳಗಳು ಹಾಗೂ 1 ಗಿಡುಗ ಕಂಡು ಬಂದಿದೆ ಎಂದು ವಿಭಾಗೀಯ ಅರಣ್ಯ ಅಧಿಕಾರಿ ರಾಜೀವ್ ಧೀಮನ್ ತಿಳಿಸಿದ್ದಾರೆ.
ಸಾವಿನ ಕಾರಣವನ್ನು ದೃಢಪಡಿಸಲು ಸಾವನ್ನಪ್ಪಿದ ಹಕ್ಕಿಗಳ ಮಾದರಿಗಳನ್ನು ಬರೇಲಿಯಲ್ಲಿರುವ ಇಂಡಿಯನ್ ವೆಟರಿನೆರಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ಕಳುಹಿಸಿ ಕೊಡಲಾಗಿದೆ ಎಂದು ಮುಖ್ಯ ವನ್ಯ ಜೀವಿ ವಾರ್ಡನ್ ಜೆ.ಎಸ್. ಸುಹಾಗ್ ತಿಳಿಸಿದ್ದಾರೆ.
ಋಷಿಕೇಶ್‌ನ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ 30ಕ್ಕೂ ಅಧಿಕ ಹಕ್ಕಿಗಳು ಪತ್ತೆಯಾಗಿವೆ. ಇದರಿಂದ ಈ ಪ್ರದೇಶದಲ್ಲಿ ಹಕ್ಕಿ ಜ್ವರದ ತೀವ್ರ ಭೀತಿ ಉಂಟಾಗಿದೆ.
ಏಮ್ಸ್‌ನ ಆವರಣದಲ್ಲಿ 28 ಕಾಗೆಗಳು ಹಾಗೂ ಪಾರಿವಾಳಗಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಬಿಘಾ ಪ್ರದೇಶದಲ್ಲಿ ಒಂದು ಹಕ್ಕಿ ಹಾಗೂ ರೈವಾಲಾ ಸ್ಟೇಷನ್‌ನಲ್ಲಿ ಎರಡು ಹಕ್ಕಿಗಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಸರಕಾರ ಪಶು ವೈದ್ಯಕೀಯ ಅಧಿಕಾರಿ ರಾಜೇಶ್ ರಾತುರಿ ತಿಳಿಸಿದ್ದಾರೆ.
ಮುಂದಿನ ಕ್ರಮಕ್ಕೆ ಹಕ್ಕಿಗಳ ಕಳೇಬರದ ಮಾದರಿಗಳನ್ನು ಅರಣ್ಯ ಇಲಾಖೆಗೆ ಕಳುಹಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.