ಟ್ರಂಪ್ ವಿರುದ್ಧ ಕ್ರಮ ಕೈಗೊಂಡ ಕಾರಣ ಟ್ವಿಟರ್ ಶೇರುಗಳ ಮೌಲ್ಯ 6 ಶೇಕಡ ಇಳಿಕೆ

Update: 2021-01-12 16:57 GMT

ವಾಶಿಂಗ್ಟನ್, ಜ. 12: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸ್ಥಗಿತಗೊಳಿಸಿರುವುದಕ್ಕಾಗಿ ಹಾಗೂ ಕಳೆದ ವಾರ ಸಂಸತ್ ಮೇಲೆ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯನ್ನು ವೈಭವೀಕರಿಸುತ್ತಿರುವ ವೆಬ್‌ಸೈಟ್‌ಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಂಡಿರುವುದಕ್ಕಾಗಿ ಟ್ವಿಟರ್, ಅಮೆಝಾನ್ ಮತ್ತು ಇತರ ತಂತ್ರಜ್ಞಾನ ಕಂಪೆನಿಗಳು ಸೋಮವಾರ ಹೊಸದಾಗಿ ಪ್ರತೀಕಾರವನ್ನು ಎದುರಿಸಿವೆ.

ಟ್ರಂಪ್‌ರ ಅಪಾಯಕಾರಿ ಬಡಬಡಿಕೆಗಳು ಮತ್ತಷ್ಟು ಹಿಂಸಾಚಾರವನ್ನು ಪ್ರಚೋದಿಸಬಹುದು ಎಂಬ ಕಾರಣ ನೀಡಿ ಟ್ವಿಟರ್ ಅವರ ಖಾತೆಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ ಬಳಿಕ, ಸೋಮವಾರ ಅದರ ಶೇರುಗಳ ಮೌಲ್ಯ 6 ಶೇಕಡಕ್ಕೂ ಅಧಿಕ ಕುಸಿದಿದೆ.

ಸಾಮಾಜಿಕ ಮಾಧ್ಯಮಗಳು ಟ್ರಂಪ್‌ರನ್ನು ಬಹಿಷ್ಕರಿಸಿದ ಬಳಿಕ, ‘ಪಾರ್ಲರ್’ ಎನ್ನುವುದು ಟ್ರಂಪ್ ಬೆಂಬಲಿಗರ ಹೊಸ ಸಾಮಾಜಿಕ ಮಾಧ್ಯಮವಾಗಿದೆ. ಪಾರ್ಲರ್‌ಗೆ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ಒದಗಿಸುತ್ತಿದ್ದ ಅವೆುಝಾನ್ ವೆಬ್ ಸರ್ವಿಸಸ್ ಸೋಮವಾರದಿಂದ ಅದರೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡಿದೆ. ಈ ಹಿನ್ನೆಲೆಯಲ್ಲಿ, ಅಮೆಝಾನ್ ವಿರುದ್ಧ ಪಾರ್ಲರ್ ನ್ಯಾಯಾಲಯದ ಮೆಟ್ಟಿಲು ಹತ್ತಿದೆ.

ಫೇಸ್‌ಬುಕ್ ಕೂಡ ಟ್ರಂಪ್ ಖಾತೆಗೆ ಹಲವು ನಿರ್ಬಂಧಗಳನ್ನು ವಿಧಿಸಿದೆ.

ಟ್ವಿಟರ್ ಕಂಪೆನಿ ಎದುರು ಟ್ರಂಪ್ ಬೆಂಬಲಿಗರ ಪ್ರತಿಭಟನೆ ಠುಸ್

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಜ. 12: ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಖಾತೆಗಳನ್ನು ನಿಷೇಧಿಸಿರುವುದಕ್ಕಾಗಿ ಸಾಮಾಜಿಕ ಮಾಧ್ಯಮ ಟ್ವಿಟರ್‌ನ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಪ್ರಧಾನ ಕಚೇರಿಯ ಎದುರು ಟ್ರಂಪ್ ಬೆಂಬಲಿಗರು ಸೋಮವಾರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ವಿಫಲವಾಗಿದೆ. ಕೇವಲ ಬೆರಳೆಣೆಕೆಯಷ್ಟು ಟ್ರಂಪ್ ಬೆಂಬಲಿಗರು ಟ್ವಿಟರ್ ಕಚೇರಿಯ ಸಮೀಪಕ್ಕೆ ಬಂದರು.

ಟ್ವಿಟರ್ ಪ್ರಧಾನ ಕಚೇರಿಯ ಎದುರು ಜಮಾಯಿಸುವಂತೆ ಕಡು ಬಲಪಂಥೀಯ ಸಂಘಟನೆ ‘ದಡೊನಾಲ್ಡ್.ವಿನ್’ ಟ್ರಂಪ್ ಬೆಂಬಲಿಗರಿಗೆ ಕರೆ ನೀಡಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿದ್ದ ಪೊಲೀಸರು ರಸ್ತೆ ತಡೆಗಳನ್ನು ನಿರ್ಮಿಸಿದ್ದರು. ಆದರೆ ಕೆಲವೇ ಸಂಖ್ಯೆಯ ಪ್ರತಿಭಟನಕಾರರು ಮತ್ತು ಪ್ರತಿ-ಪ್ರತಿಭಟನಕಾರರು ಅಲ್ಲಿಗೆ ತಲುಪಿದರು.

ಟ್ರಂಪ್ ನಿಷೇಧ ಕೊನೆಗೊಳಿಸುವ ಉದ್ದೇಶವಿಲ್ಲ: ಫೇಸ್‌ಬುಕ್

ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಖಾತೆಯ ಮೇಲೆ ವಿಧಿಸಲಾಗಿರುವ ನಿಷೇಧವನ್ನು ತೆರವುಗೊಳಿಸುವ ಉದ್ದೇಶವನ್ನು ಫೇಸ್‌ಬುಕ್ ಹೊಂದಿಲ್ಲ ಎಂದು ಫೇಸ್‌ಬುಕ್‌ನ ಎರಡನೇ ಉನ್ನತ ಅಧಿಕಾರಿ, ಚೀಫ್ ಆಪರೇಟಿಂಗ್ ಆಫಿಸರ್ ಶೆರಿಲ್ ಸ್ಯಾಂಡ್‌ಬರ್ಗ್ ಸೋಮವಾರ ಹೇಳಿದ್ದಾರೆ.

  ‘‘ನಮ್ಮ ನಿಷೇಧ ಅನಿರ್ದಿಷ್ಟಾವಾಧಿಯದ್ದು. ಕನಿಷ್ಠ ಅಧಿಕಾರ ಹಸ್ತಾಂತರವಾಗುವವರೆಗೆ ನಿಷೇಧ ಇರಲಿದೆ ಎಂದು ನಾವು ಹೇಳಿದ್ದೆವು. ಆದರೆ, ಅದರ ಬಳಿಕವೂ ಅದನ್ನು ತೆರವುಗೊಳಿಸುವ ಉದ್ದೇಶವನ್ನು ನಾವು ಹೊಂದಿಲ್ಲ’’ ಎಂದು ‘ರಾಯ್ಟರ್ಸ್’ ಏರ್ಪಡಿಸಿದ ಆನ್‌ಲೈನ್ ವೇದಿಕೆಯಲ್ಲಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News