ಟ್ರಂಪ್ ತಪ್ಪಾಗಿ ವಿವೇಕಾನಂದರ ಹೆಸರು ಉಚ್ಚರಿಸಿದಾಗ ಬಿಜೆಪಿ ನಾಯಕರು ಪ್ರತಿಭಟಿಸಲಿಲ್ಲವೇಕೆ?: ಅಭಿಷೇಕ್ ಬ್ಯಾನರ್ಜಿ

Update: 2021-01-12 18:00 GMT

ಕೋಲ್ಕತಾ: ಬಂಗಾಳದ ಐಕಾನ್ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆಯ ದಿನದಂದು ಬಿಜೆಪಿ ಹಾಗೂ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಗಳು ರಾಜಕೀಯ ಕಾಳಗವನ್ನು ಮುಂದುವರಿಸಿವೆ. ವಿವೇಕಾನಂದರ ಜನ್ಮದಿನವಾಗಿರುವ ಇಂದು ರಾಜಕೀಯ ನಾಯಕರು ಸೆಂಟ್ರಲ್ ಕೋಲ್ಕತಾದಲ್ಲಿರುವ ವಿವೇಕಾನಂದರ ಪೂರ್ವಜರ ಮನೆಗೆ ಧಾವಿಸಿ ನಮನ ಸಲ್ಲಿಸಿದರು.

ಸ್ವಾಮಿ ವಿವೇಕಾನಂದರ ಗೌರವಾರ್ಥ ದಕ್ಷಿಣ  ಕೋಲ್ಕತಾದಲ್ಲಿ ಮೆರವಣಿಗೆ ನಡೆಸಿದ ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ, ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

"ಬಿಜೆಪಿಗೆ ಸ್ವಾಮಿ ವಿವೇಕಾನಂದರ ಫೋಟೊಗಳನ್ನು ಪ್ರದರ್ಶಿಸಲು ಹಾಗೂ ಮೆರವಣಿಗೆ ನಡೆಸುವ ಹಕ್ಕಿಲ್ಲ. ಅವರ ಹೆಸರು ಹೇಳುವ ಹಕ್ಕು ಆ ಪಕ್ಷಕ್ಕಿಲ್ಲ. ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ದ್ವೇಷ ಹಾಗೂ ಕೋಮುವಾದದ ವಾತಾವರಣ ನಿರ್ಮಿಸಿರುವ ಆಡಳಿರೂಢ ಬಿಜೆಪಿಗೆ ನಾಚಿಕೆಯಾಗಬೇಕು'' ಎಂದರು.

"ಕಳೆದ ವರ್ಷ ಫೆ.24ರಂದು ಕೇಂದ್ರ ಸರಕಾರ ಡೊನಾಲ್ಡ್ ಟ್ರಂಪ್ ರನ್ನು ಅಹ್ಮದಾಬಾದ್ ಗೆ ಕರೆಸಿಕೊಂಡಿತ್ತು. ಕಾರ್ಯಕ್ರಮದಲ್ಲಿ ಟ್ರಂಪ್  ಅವರು ಸ್ವಾಮಿ ವಿವೇಕಾನಂದರ ಹೆಸರನ್ನು ‘ವಿವೇಕಾ ಮುಂಡನ’  ಎಂದು ತಪ್ಪು ತಪ್ಪಾಗಿ ಉಚ್ಚರಿಸಿದ್ದರು. ಹಿಂದೂ ಧರ್ಮದ ದೊಡ್ಡ ಚಾಂಪಿಯನ್ ಎಂದು ಕರೆಸಿಕೊಳ್ಳುವವರು(ಪ್ರಧಾನಿಯನ್ನು ಉಲ್ಲೇಖಿಸಿ)ಟ್ರಂಪ್ ಪಕ್ಕದಲ್ಲೇ ಕುಳಿತುಕೊಂಡು ಚಪ್ಪಾಳೆ ತಟ್ಟುತ್ತಿದ್ದರು. ಇದಕ್ಕಿಂತ ಹೆಚ್ಚು ನಾಚಿಕೆಯ ವಿಚಾರ ಬೇರೊಂದಿಲ್ಲ. ಆಗ ಯಾವೊಬ್ಬ ಬಿಜೆಪಿ ನಾಯಕ ಎದ್ದುನಿಂತು ಪ್ರತಿಭಟಿಸಿದ್ದಾನೆಯೇ? ಪ್ರಧಾನಿಯವರು ಡೊನಾಲ್ಡ್ ಟ್ರಂಪ್ ರಿಂದ ಮೈಕ್ ಕಸಿದು ಕೊಂಡು ಸ್ವಾಮಿಯವರ ಹೆಸರನ್ನು ಸರಿಯಾಗಿ ಉಚ್ಚರಿಸಬಹುದಿತ್ತು. ಆದರೆ ಅವರು ಕುಳಿತುಕೊಂಡು ಚಪ್ಪಾಳೆ ತಟ್ಟುತ್ತಿದ್ದರು. ಇಲ್ಲಿನ ಬಿಜೆಪಿ ನಾಯಕರು ಟ್ರಂಪ್ ರನ್ನು ಭಾರತಕ್ಕೆ ಕರೆತಂದಿದ್ದಕ್ಕೆ ಪ್ರಧಾನಿಯನ್ನು ಹೊಗಳುತ್ತಿದ್ದರು. ಈಗ ಟ್ರಂಪ್ ನಿರ್ಗಮಿಸಿದ್ದಾರೆ. ಕೆಲವರು ಉಳಿದಿದ್ದಾರೆ. ಅವರನ್ನು ನಾವು ರಾಜಕೀಯವಾಗಿ ನಿಭಾಯಿಸುತ್ತೇವೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News