ಥಾಯ್ಲೆಂಡ್ ಓಪನ್: ಶ್ರೀಕಾಂತ್ ಎರಡನೇ ಸುತ್ತಿಗೆ

Update: 2021-01-14 05:45 GMT

 ಬ್ಯಾಂಕಾಕ್, ಜ.12: ಭಾರತದ ಕಿದಂಬಿ ಶ್ರೀಕಾಂತ್ ಥಾಯ್ಲೆಂಡ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಬುಧವಾರ ಎರಡನೇ ಸುತ್ತು ಪ್ರವೇಶಿಸಿದರು.

 ಇದೇ ವೇಳೆ ಪಾರುಪಲ್ಲಿ ಕಶ್ಯಪ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಮಧ್ಯದಲ್ಲಿ ನಿವೃತ್ತರಾಗುವ ಮೂಲಕ ಕೂಟದಿಂದ ನಿರ್ಗಮಿಸಿದರು.

 ಶ್ರೀಕಾಂತ್ ಥಾಯ್ಲೆಂಡ್ ಓಪನ್ ಸೂಪರ್ 1000 ಪಂದ್ಯಾವಳಿಯ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ತಮ್ಮ ದೇಶದ ಸೌರಭ್ ವರ್ಮಾರನ್ನು 21-12, 21-11 ಅಂತರದಲ್ಲಿ ಮಣಿಸಿದರು. ಅವರ ಮೇಲೆ ಮೇಲುಗೈ ಸಾಧಿಸಲು ಶ್ರೀಕಾಂತ್ ಕೇವಲ 31 ನಿಮಿಷಗಳನ್ನು ತೆಗೆದುಕೊಂಡರು. ಕಶ್ಯಪ್ ಅವರು ಕೆನಡಾದ ಜೇಸನ್ ಆಂಥೋನಿ ಹೋ-ಶೂ ವಿರುದ್ಧದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಮಧದಲ್ಲೇ ನಿವೃತ್ತರಾಗಬೇಕಾಯಿತು.

  ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಕಶ್ಯಪ್ ಮೂರನೇ ಗೇಮ್‌ನಲ್ಲಿ 8-14 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದರು. ಮೊದಲ ಗೇಮ್‌ನ್ನು 9-21 ಅಂತರದಿಂದ ಕಳೆದುಕೊಂಡಿದ್ದರು.

 ಪುರುಷರ ಡಬಲ್ಸ್‌ನಲ್ಲಿ ದಕ್ಷಿಣ ಕೊರಿಯಾದ ಜೋಡಿ ಕಿಮ್ ಗಿ ಜಂಗ್ ಮತ್ತು ಲೀ ಯೊಂಗ್ ಡೇ ಅವರನ್ನು ಭಾರತದ ಸಾತ್ವಿಕ್ ಸಾಯ್‌ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 19-21, 21-16, 21-14ರಿಂದ ಸದೆ ಬಡಿದರು. ಆದಾಗ್ಯೂ, ಅರ್ಜುನ್ ಮದತಿಲ್ ರಾಮಚಂದ್ರನ್ ಮತ್ತು ಧ್ರುವ್ ಕಪಿಲಾ ಅವರು ಮಲೇಷ್ಯಾದ ಜೋಡಿ ಓಂಗ್ ಯೂ ಸಿನ್ ಮತ್ತು ಟಿಯೋ ಯಿ ವಿರುದ್ಧ 21-13, 8-21, 22-24 ಅಂತರದಲ್ಲಿ ಸೋತರು.

 ಮಿಶ್ರ ಡಬಲ್ಸ್ ಜೋಡಿ ಎನ್.ಸಿಕ್ಕಿ ರೆಡ್ಡಿ ಮತ್ತು ಸುಮೀತ್ ರೆಡ್ಡಿ .ಬಿ ಸಹ ಆರಂಭಿಕ ಹಂತವನ್ನು ದಾಟಲು ವಿಫಲರಾದರು ಅವರು ಚುಂಗ್ ಮ್ಯಾನ್ ಟ್ಯಾಂಗ್ ಮತ್ತು ಯೋಂಗ್ ಸೂಟ್ ತ್ಸೆ ಎದುರು 20-22, 17-21 ಅಂತರದಲ್ಲಿ ಸೋಲು ಅನುಭವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News