ಲಕ್ನೋ: ಬಿಜೆಪಿ ಸೇರಿದ ಪ್ರಧಾನಿ ಮೋದಿ ಆಪ್ತ, ಮಾಜಿ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಶರ್ಮ

Update: 2021-01-14 08:41 GMT
photo: ANI

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರ ಸಮೀಪವರ್ತಿ ಎಂದೇ ತಿಳಿಯಲಾದ ಮಾಜಿ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಶರ್ಮ ಇಂದು ಲಕ್ನೋದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಒಂದು ವಾರದ ಹಿಂದೆಯಷ್ಟೇ ಶರ್ಮ ಅವರು ಐಎಎಸ್ ಹುದ್ದೆಯಿಂದ ವಿಆರ್‍ಎಸ್ ಪಡೆದುಕೊಂಡಿದ್ದರು.

ಮೋದಿ ಸರಕಾರದ ಎಂಎಸ್‍ಎಂಇ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಶರ್ಮ ಅದಕ್ಕೂ ಮುಂಚೆ ಆರು ವರ್ಷ ಪ್ರಧಾನಿ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಇಂದು ಲಕ್ನೋದ ಬಿಜೆಪಿ ಕಚೇರಿಯಲ್ಲಿ ಅವರು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಆದರೆ ಅವರಿಗೆ ಪಕ್ಷದಲ್ಲಿ ಯಾವ ಜವಾಬ್ದಾರಿ ವಹಿಸಲಾಗುವುದು ಎಂದು ತಮಗೆ ತಿಳಿದಿಲ್ಲ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಚಂದ್ರಮೋಹನ್ ಹೇಳಿದ್ದಾರೆ.

ಆದರೆ ಮೂಲಗಳ ಪ್ರಕಾರ ಶರ್ಮ ಅವರಿಗೆ ಸದ್ಯದಲ್ಲಿಯೇ ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಟಿಕೆಟ್ ದೊರೆಯುವ ಸಾಧ್ಯತೆಯಿದೆ. ಮುಂದೆ ಅವರಿಗೆ ಯೋಗಿ ಆದಿತ್ಯನಾಥ್ ಸಂಪುಟ ಪುನಾರಚನೆಯಾದಾಗ ಮಹತ್ವದ ಸಚಿವ ಸ್ಥಾನ ನೀಡಲಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ರಾಜ್ಯದ 12 ಎಂಎಲ್‍ಸಿ ಸ್ಥಾನಗಳಿಗೆ ಜನವರಿ 28ರಂದು ಚುನಾವಣೆ ನಡೆಯಲಿದೆ.

ಶರ್ಮ ಅವರು ಉತ್ತರ ಪ್ರದೇಶದ ಆಝಂಘರ್‍ ನವರಾಗಿದ್ದು ಗುಜರಾತ್ ಕೇಡರ್‍ನ 1988 ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿದ್ದಾರೆ. ಮೋದಿ 2001ರಲ್ಲಿ ಗುಜರಾತ್ ಸೀಎಂ ಆದಾಗಿನಿಂದ ಶರ್ಮ ಅವರ ಆತ್ಮೀಯರಾಗಿದ್ದಾರೆನ್ನಲಾಗಿದೆ. ಆ ಸಂದರ್ಭ ಅವರು ಗುಜರಾತ್ ಇನ್‍ಫ್ರಾಸ್ಟ್ರಕ್ಚರ್ ಡೆವಲೆಪ್ಮೆಂಟ್ ಬೋರ್ಡ್‍ನ ಮುಖ್ಯ ಅಧಿಕಾರಿಯಾಗಿದ್ದರು. 2014ರಲ್ಲಿ ಪ್ರಧಾನಿ ಕಾರ್ಯಾಲಯದ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಅವರು 2017ರಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಭಡ್ತಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News