ಬಾಲಕಿಯರು 15ರ ಹರೆಯದಲ್ಲೇ ಸಂತಾನೋತ್ಪತ್ತಿ ಮಾಡಬಹುದಾದರೆ ವಿವಾಹದ ವಯಸ್ಸನ್ನು ಹೆಚ್ಚಿಸುವುದೇಕೆ?

Update: 2021-01-14 09:21 GMT

ಭೋಪಾಲ್,ಜ.14: "ಬಾಲಕಿಯರು 15 ವರ್ಷ ಪ್ರಾಯದಲ್ಲಿಯೇ ಸಂತಾನೋತ್ಪತ್ತಿ ಮಾಡಬಹುದಾಗಿರುವುದರಿಂದ ವಿವಾಹದ ವಯಸ್ಸನ್ನು ಈಗಿನ 18ರಿಂದ 21ಕ್ಕೆ ಏಕೆ ಏರಿಸಬೇಕು?" ಎಂಬ ಪ್ರಶ್ನೆಯನ್ನೆತ್ತಿ ಮಧ್ಯ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಪಿಡಬ್ಲ್ಯುಡಿ ಸಚಿವ ಹಾಗೂ ಮಾಜಿ ಸಿಎಂ ಕಮಲ್ ನಾಥ್ ಅವರ ಸಮೀಪವರ್ತಿಯಾಗಿರುವ ಸಜ್ಜನ್ ಸಿಂಗ್ ವರ್ಮ ನೀಡಿರುವ ಹೇಳಿಕೆ ರಾಜ್ಯ ಕಾಂಗ್ರೆಸ್‍ ಗೆ ಮುಜುಗರ ಸೃಷ್ಟಿಸಿದೆ.

"ಇದನ್ನು ನಾನಾಗಿಯೇ ಹೇಳುತ್ತಿಲ್ಲ.  ವೈದ್ಯರ ವರದಿಗಳ ಪ್ರಕಾರ  ಬಾಲಕಿಯರು 15 ವರ್ಷ ಪ್ರಾಯದಲ್ಲಿಯೇ ಮಕ್ಕಳನ್ನು ಹೆರಬಹುದಾಗಿದೆ. ಇದೇ ಕಾರಣಕ್ಕೆ  ಕನಿಷ್ಠ 18 ವರ್ಷ ವಯಸ್ಸಿನ ಯುವತಿ ವಿವಾಹವಾಗಲು ಪ್ರಬುದ್ಧಳು ಎಂದು ತಿಳಿಯಲಾಗಿದೆ," ಎಂದು ಹೇಳಿದ ವರ್ಮ "ಯುವತಿಯರು 18 ವರ್ಷದ ನಂತರ ತಮ್ಮ  `ಸಸುರಾಲ್' (ಅತ್ತೆ ಮಾವನ  ಮನೆಗೆ) ಹೋಗಿ ಅಲ್ಲಿ ಖುಷಿಯಾಗಿರಬೇಕು," ಎಂದಿದ್ದಾರೆ.

ಯುವತಿಯರ ವಿವಾಹ ವಯಸ್ಸು ಈಗಿನ 18ರಿಂದ 21ಕ್ಕೆ ಏರಿಸಬೇಕೆಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು "ಹೀಗೆ ಹೇಳಲು ಅವರೇನು ವಿಜ್ಞಾನಿಯೇ ಅಥವಾ ದೊಡ್ಡ ವೈದ್ಯರೇ?," ಎಂದು ಮರುಪ್ರಶ್ನಿಸಿದ್ದಾರೆ.

ವರ್ಮ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಹುಲ್ ಕೊಠಾರಿ, "ಅವರು ಮಧ್ಯ ಪ್ರದೇಶ ಮಾತ್ರವಲ್ಲ, ದೇಶಾದ್ಯಂತ ಪುತ್ರಿಯರನ್ನು ಅವಮಾನಿಸಿದ್ದಾರೆ" ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಮಾತ್ರ ಇದೇನೂ ದೊಡ್ಡ ವಿವಾದವಲ್ಲ ಎಂಬಂತೆ ಪ್ರತಿಕ್ರಿಯಿಸಿದೆ. "ಒಂದು ವಿಚಾರವೇ ಅಲ್ಲದ ವಿಷಯವನ್ನೆತ್ತಿಕೊಂಡು ಬಿಜೆಪಿ ವಿವಾದವೆಬ್ಬಿಸುತ್ತಿದೆ" ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಭೂಪೇಂದರ್ ಗುಪ್ತಾ  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News