×
Ad

ಯುವತಿ ನಾಪತ್ತೆ: ಉತ್ತರಪ್ರದೇಶದಲ್ಲಿ ಕರ್ನಾಟಕದ ಯುವಕನ ವಿರುದ್ಧ ಎಫ್‌ಐಆರ್

Update: 2021-01-14 23:04 IST

ಗೋರಖ್‌ಪುರ, ಜ. 14: ಜಿಲ್ಲೆಯಿಂದ 19 ವರ್ಷದ ಯುವತಿಯನ್ನು ಅಪಹರಿಸಿದ ಹಾಗೂ ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ ಆರೋಪದಲ್ಲಿ ಕರ್ನಾಟಕದ ಮುಸ್ಲಿಂ ಯುವಕನೋರ್ವನ ವಿರುದ್ಧ ಗೋರಖ್‌ಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕಾಲೇಜಿಗೆ ತೆರಳಿದ್ದ ಯುವತಿ ಮನೆಗೆ ಹಿಂದಿರುಗದೇ ಇದ್ದಾಗ ಯುವತಿಯ ತಂದೆ ದೂರು ದಾಖಲಿಸಿದ ಒಂದು ವಾರಗಳ ಬಳಿಕ ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಯುವತಿಯ ಕರೆ ದಾಖಲೆ (ಕಾಲ್ ರೆಕಾರ್ಡ್) ಆಧಾರದಲ್ಲಿ ಆರೋಪಿ ಎಂದು ಮೆಹಬೂಬ್ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಆರೋಪಿಯ ಗುರುತಿನ ಬಗ್ಗೆ ಖಚಿತತೆ ಇಲ್ಲ. ಕರೆ ದಾಖಲೆಯಲ್ಲಿ ಈ ಮೊಬೈಲ್ ಸಂಖ್ಯೆ ಕರ್ನಾಟಕದಲ್ಲಿ ಪತ್ತೆಯಾಗಿದೆ. ಗೋರಖ್‌ಪುರದ ಚಿಲುವಾತಲ್ ಪೊಲೀಸ್ ಠಾಣೆಯ ಪೊಲೀಸರ ತಂಡ ತನಿಖೆಗೆ ಇಲ್ಲಿಂದ ತೆರಳಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯುವತಿಯ ತಂದೆ, ನಿವೃತ್ತ ಯೋಧ ತನ್ನ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಜನವರಿ 5ರಂದು ದೂರು ದಾಖಲಿಸಿದ್ದರು.

ತಾನು ಪುತ್ರಿಯನ್ನು ಕಾಲೇಜಿಗೆ ಬಿಟ್ಟಿದ್ದೆ. ಆದರೆ, ಆಕೆ ಮನೆಗೆ ಹಿಂದಿರುಗಿಲ್ಲ ಎಂದು ದೂರಿನಲ್ಲಿ ಹೇಳಿದ್ದರು. ಒಂದು ವಾರಗಳ ಬಳಿಕ ಯುವತಿಯ ಕರೆ ದಾಖಲೆಯ ಆಧಾರದಲ್ಲಿ ಯುವತಿಯ ತಂದೆ, ‘ತಾನು ಹಿಂದೂ’ ಎಂದು ಪರಿಚಯಿಸಿಕೊಂಡಿದ್ದ ಮೆಹಬೂಬ್ 2019ರಿಂದ ತನ್ನ ಪುತ್ರಿಯ ಗೆಳೆಯನಾಗಿದ್ದ. ಈಗ ಮೆಹಬೂಬ್ ತನ್ನ ಪುತ್ರಿಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿದ್ದಾರೆ. ‘‘ಮುಸ್ಲಿಂ ಯುವಕ ಆಮಿಷವೊಡ್ಡಿ ತನ್ನ ಪುತ್ರಿಯನ್ನು ಕರೆದೊಯ್ದಿದ್ದಾನೆ. ಮತಾಂತರಕ್ಕೆ ಬಲವಂತ ಮಾಡಲು ದೂರ ಕೊಂಡೊಯ್ದಿದ್ದಾನೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಈ ಹಿಂದೆ ಯುವತಿಯ ತಂದೆಗೆ ಆರೋಪಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಹಾಗೂ ನಾಪತ್ತೆ ಪ್ರಕರಣ ಜನವರಿ 5ರಂದು ದಾಖಲಿಸಲಾಗಿದೆ’’ ಎಂದು ಚಿಲುವಾತಲ್ ಪೊಲೀಸ್ ಠಾಣೆ ಅಧಿಕಾರಿ ನೀರಜ್ ಕುಮಾರ್ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News