ಜಮ್ಮುಕಾಶ್ಮೀರ, ಲಡಾಕ್ ನ ತಪ್ಪಾದ ಚಿತ್ರಣ ತೆಗೆದು ಹಾಕುವಂತೆ ಡಬ್ಲ್ಯುಎಚ್‌ಒಗೆ ಮತ್ತೊಮ್ಮೆ ಮನವಿ ಮಾಡಿದ ಭಾರತ

Update: 2021-01-14 17:51 GMT

ಹೊಸದಿಲ್ಲಿ, ಜ. 12: ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ನ ಕೋವಿಡ್-19 ಡ್ಯಾಶ್‌ಬೋರ್ಡ್‌ನಲ್ಲಿ ಜಮ್ಮುಕಾಶ್ಮೀರ ಹಾಗೂ ಲಡಾಕ್ ಅನ್ನು ತಪ್ಪಾಗಿ ಚಿತ್ರಿಸಿದ ಕುರಿತಂತೆ ಭಾರತ ಸರಕಾರ ಕಳೆದ ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆಗೆ ಕಟುವಾದ ಶಬ್ದಗಳಲ್ಲಿ ಪತ್ರ ಬರೆದಿದೆ.

ಜಿನೇವಾದಲ್ಲಿರುವ ವಿಶ್ವಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ವಿಶ್ವಸಂಸ್ಥೆಯ ಡಿ.ಜಿ. ಡಾ. ಟೆಡ್ರೋಸ್‌ಗೆ ಜನವರಿ 8ರಂದು ಬರೆದ ಪತ್ರದಲ್ಲಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾರತದ ಗಡಿಯನ್ನು ತಪ್ಪಾಗಿ ಚಿತ್ರಿಸಿದ ನಕಾಶೆಯನ್ನು ತೆಗೆದು ಹಾಕುವಂತೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮನವಿ ಮಾಡಿದ್ದಾರೆ.

ರಾಯಬಾರಿ ಇಂದ್ರಮಣಿ ಪಾಂಡೇ, ‘‘ವಿಶ್ವ ಆರೋಗ್ಯ ಸಂಸ್ಥೆಯ ವಿವಿಧ ವೆಬ್ ಪೋರ್ಟಲ್‌ಗಳ ನಕಾಶೆಯಲ್ಲಿ ಗಡಿಯನ್ನು ತಪ್ಪಾಗಿ ಚಿತ್ರಿಸಿರುವುದಕ್ಕೆ ನನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಲು ಈ ಪತ್ರ ಬರೆಯುತ್ತಿದ್ದೇನೆ. ಇದೇ ರೀತಿಯ ತಪ್ಪುಗಳನ್ನು ಗುರುತಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ನಾವು ಈ ಹಿಂದೆ ಕೂಡ ಸಂದೇಶ ಕಳುಹಿಸಿ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸಿದ್ದೇವೆ’’ ಎಂದು ಅವರು ಹೇಳಿದ್ದಾರೆ.

‘‘ವಿಶ್ವ ಆರೋಗ್ಯ ಸಂಸ್ಥೆಯ ವಿವಿಧ ವೆಬ್ ಪೋರ್ಟಲ್‌ಗಳಿಂದ ಭಾರತದ ಗಡಿಯನ್ನು ತಪ್ಪಾಗಿ ಚಿತ್ರಿಸುವ ನಕಾಶೆಯನ್ನು ತೆಗೆಯಲು ಕೂಡಲೇ ಹಸ್ತಕ್ಷೇಪ ನಡೆಸುವಂತೆ ಹಾಗೂ ಅದರ ಬದಲಿಗೆ ಸರಿಯಾದ ನಕಾಶೆಯನ್ನು ಹಾಕುವಂತೆ ನಾನು ನಿಮ್ಮಲ್ಲಿ ಮತ್ತೊಮ್ಮೆ ವಿನಂತಿಸುತ್ತೇನೆ.’’ ಎಂದು ಅವರು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ತನ್ನ ಕೋವಿಡ್-19 ಡ್ಯಾಶ್‌ಬೋರ್ಡ್‌ನಲ್ಲಿ ಬಣ್ಣದ ಸಂಕೇತವುಳ್ಳ ನಕಾಶೆಯನ್ನು ಹಾಕಿದ ಬಳಿಕ ಭಾರತ ಉನ್ನತ ಮಟ್ಟದಲ್ಲಿ ಔಪಚಾರಿಕ ಪ್ರತಿಭಟನೆ ವ್ಯಕ್ತಪಡಿಸಿ ಬರೆಯುತ್ತಿರುವ ಮೂರನೇ ಪತ್ರ ಇದಾಗಿದೆ. ಜಿನೇವಾದಲ್ಲಿರುವ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಇತ್ತೀಚೆಗೆ ಡಿ.ಜಿ. ಟೆಡ್ರೂಸ್ ಅವರಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿದ್ದರು ಹಾಗೂ ಅದನ್ನು ಮುಂದುವರಿಸಿದ್ದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News