ಇಂಡೋನೇಶ್ಯ: ಪ್ರಬಲ ಭೂಕಂಪ; ಕನಿಷ್ಠ 42 ಮಂದಿ ಸಾವು, ನೂರಾರು ಮಂದಿಗೆ ಗಾಯ

Update: 2021-01-15 17:59 GMT

ಜಕಾರ್ತ (ಇಂಡೋನೇಶ್ಯ), ಜ. 15: ಶುಕ್ರವಾರ ಮುಂಜಾನೆ ಇಂಡೋನೇಶ್ಯದ ಸುಲವೆಸಿ ದ್ವೀಪದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 42 ಮಂದಿ ಮೃತಪಟ್ಟಿದ್ದಾರೆ ಹಾಗೂ ನೂರಾರು ಮಂದಿ ಗಾಯಗೊಂಡಿದ್ದಾರೆ.

ಅದೇ ವೇಳೆ, ಹಲವಾರು ಮಂದಿ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಭೂಕಂಪದ ಬಳಿಕ ಡಝನ್‌ಗಟ್ಟಳೆ ಪಶ್ಚಾತ್ ಕಂಪನಗಳು ಸಂಭವಿಸಿವೆ. ಇನ್ನಷ್ಟು ಭೂಕಂಪಗಳು ಸಂಭವಿಸುವ ಸಾಧ್ಯತೆಯಿದ್ದು, ಸುನಾಮಿ ಅಲೆಗಳ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಶುಕ್ರವಾರ ಮುಂಜಾನೆ 1:30ರ ಹೊತ್ತಿಗೆ ಮಜೆನೆ ಪಟ್ಟಣದಿಂದ 6 ಕಿ.ಮೀ. ದೂರದಲ್ಲಿ ಕೇವಲ 10 ಕಿ.ಮೀ. ಆಳದಲ್ಲಿ ರಿಕ್ಟರ್ ಮಾಪಕದಲ್ಲಿ 6.2ರ ತೀವ್ರತೆಯ ಭೂಕಂಪ ಸಂಭವಿಸಿತು. ಭಯಭೀತ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದು ಎತ್ತರದ ಪ್ರದೇಶಗಳಿಗೆ ಧಾವಿಸಿದರು.

ಭೂಕಂಪ ಮತ್ತು ಬಳಿಕ ಸಂಭವಿಸಿದ ಪಶ್ಚಾತ್ ಕಂಪನಗಳಿಂದಾಗಿ 300ಕ್ಕೂ ಅಧಿಕ ಮನೆಗಳು ಮತ್ತು ಎರಡು ಹೊಟೇಲ್‌ಗಳು ಕುಸಿದಿವೆ. ಆಸ್ಪತ್ರೆಯೊಂದು ಧರಾಶಾಯಿಯಾಗಿದೆ. ಪ್ರಾದೇಶಿಕ ಗವರ್ನರ್ ಕಚೇರಿಯೂ ಕುಸಿದಿದ್ದು, ಅಲ್ಲಿ ಹಲವಾರು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ.

ಮೃತರ ಪೈಕಿ ಹೆಚ್ಚಿನವರು ಮಮುಜು ಪಟ್ಟಣದ ನಿವಾಸಿಗಳು ಹಾಗೂ ಉಳಿದವರು ನೆರೆಯ ಮಜೆನೆ ಜಿಲ್ಲೆಯವರು ಎಂದು ದೇಶದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. 820ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ.

ಈವರೆಗೆ ಸುನಾಮಿ ಎಚ್ಚರಿಕೆಯನ್ನು ಹೊರಡಿಸಲಾಗಿಲ್ಲ. ಆದರೆ, ಪಶ್ಚಾತ್ ಕಂಪನಗಳು ಇನ್ನೂ ಮುಂದುವರಿಯಬಹುದು ಹಾಗೂ ಇನ್ನೊಂದು ಪ್ರಬಲ ಕಂಪನ ಸಂಭವಿಸಿದರೆ ಸುನಾಮಿ ಸೃಷ್ಟಿಯಾಗಬಹುದು ಎಂದು ಇಂಡೋನೇಶ್ಯದ ಹವಾಮಾನ ಮತ್ತು ಭೂಗೋಳ ಸಂಸ್ಥೆಯ ಅಧಿಕಾರಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News