ರಿಪಬ್ಲಿಕ್‌ ಟಿವಿಯ ಬಹುಕೋಟಿ ಹಗರಣವನ್ನು ರಾಜ್ಯವರ್ಧನ್‌ ರಾಥೋಡ್‌ ಮುಚ್ಚಿ ಹಾಕಿದರೇ?

Update: 2021-01-16 17:23 GMT

ಹೊಸದಿಲ್ಲಿ,ಜ.16: ಅರ್ನಬ್‌ ಗೋಸ್ವಾಮಿ ಹಾಗೂ BARC ಸಿಇಒ ಪಾರ್ಥೋ ದಾಸಗುಪ್ತ ನಡುವೆ ನಡೆದಿದೆ ಎನ್ನಲಾದ ವಾಟ್ಸ್ಯಾಪ್‌ ಚಾಟ್‌ ಸದ್ಯ ಹಲವಾರು ಸಂಶಯಗಳನ್ನು ಹುಟ್ಟು ಹಾಕುತ್ತಿದೆ. ಇದೀಗ ಅರ್ನಬ್‌ ಒಡೆತನದ ರಿಪಬ್ಲಿಕ್‌ ಟಿವಿಯು ತನ್ನ ಬಹುಕೋಟಿ ಹಗರಣವನ್ನು ಮುಚ್ಚಿ ಹಾಕಲು ಆಗಿನ ಸಚಿವ ರಾಜ್ಯವರ್ಧನ್‌ ರಾಥೋಡ್‌ ರೊಂದಿಗೆ ಒಪ್ಪಂದ ಮಾಡಿತ್ತೇ ಎನ್ನುವ ಪ್ರಶ್ನೆಯು ಕೇಳಿ ಬರುತ್ತಿದ್ದು, ಈ ಕುರಿತಾದಂತೆ newslaundry.com ವರದಿ ಮಾಡಿದೆ.

ಪ್ರಸಾರ ಭಾರತಿಯ ಅಧೀನದಲ್ಲಿ ʼಡಿಡಿ ಫ್ರೀ ಡಿಶ್‌ʼವ್ಯವಸ್ಥೆಯನ್ನು ಭಾರತ ಸರಕಾರವು 2017ರಲ್ಲಿ ಜಾರಿಗೆ ತಂದಿದ್ದು, ದೇಶಾದ್ಯಂತ ಇದು 22 ಮಿಲಿಯನ್‌ ಸಬ್‌ ಸ್ಕ್ರೈಬರ್‌ ಗಳನ್ನು ಹೊಂದಿತ್ತು. ಹಿಂದಿ ಮಾತನಾಡುವ ಗ್ರಾಮೀಣ ಪ್ರದೇಶಗಳಲ್ಲಿ ಇದು ಹೆಚ್ಚು ಜನಪ್ರಿಯತೆ ಗಳಿಸಿತ್ತು. ನಿಗದಿತ ಅವಧಿಯವರೆಗೆ ಈ ವ್ಯವಸ್ಥೆಯಡಿ ಪ್ರಸಾರ ಮಾಡಬೇಕಾದರೆ ಕೋಟಿಗಟ್ಟಲೆ ಹಣವನ್ನು ಚಾನೆಲ್‌ ಗಳು ಪಾವತಿಸಬೇಕಿತ್ತು.

ರಿಪಬ್ಲಿಕ್‌ ಟಿವಿ ಹಾಗೂ ಝೀ ಮೀಡಿಯಾ ಈ ಹಣವನ್ನು ಪಾವತಿಸಿರಲಿಲ್ಲ ಎನ್ನಲಾಗಿದೆ. ಒಟ್ಟು ಮೂರು ಕಂಪೆನಿಗಳು 52 ಕೋಟಿ ರೂ. ಪಾವತಿಸಬೇಕಿತ್ತು. ಈ ಕುರಿತಾದಂತೆ ಡಿಸೆಂಬರ್‌ 2020 ರಲ್ಲಿ  newslaundry.com ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿತ್ತು.

ಇದೀಗ ಅರ್ನಬ್‌ ಗೋಸ್ವಾಮಿಯ ವಾಟ್ಸಾಪ್‌ ಚಾಟ್‌ ವೈರಲ್‌ ಆದ ಬಳಿಕ ಹಲವಾರು ಪ್ರಕರಣಗಳು ಬೆಳಕಿಗೆ ಬಂದಂತೆ ರಾಜ್ಯವರ್ಧನ್‌ ರಾಥೋಡ್‌ ಕುರಿತಾದಂತ ಮಾಹಿತಿಯೂ ಉಲ್ಲೇಖವಾಗಿದೆ ಎಂದು ವರದಿ ತಿಳಿಸಿದೆ. 2017 ಜುಲೈ ಏಳರಂದು ರಿಪಬ್ಲಿಕ್‌ ಟಿವಿಯ ವಂಚನೆಯ ಕುರಿತಾದಂತೆ ದೂರದರ್ಶನವು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ತಿಳಿಸಿತ್ತು. ಈ ವೇಳೆ ವಾಟ್ಸಾಪ್‌ ಚಾಟ್‌ ನಲ್ಲಿ ದಾಸ್‌ ಗುಪ್ತಾ, “ಇಲಾಖೆಯಲ್ಲಿ ರಿಪಬ್ಲಿಕ್‌ ಟಿವಿ ಕುರಿತಾದಂತೆ ದೂರುಗಳು ಕೇಳಿ ಬರುತ್ತಿವೆ. ಈ ಕುರಿತು ನಮ್ಮಲ್ಲಿ ಇನ್ನೂ ಉಲ್ಲೇಖಿಸಿಲ್ಲ. ಈ ಕುರಿತು ಜೆಎಸ್‌ (ಜಾಯಿಂಟ್‌ ಸೆಕ್ರೆಟರಿ) ನನಗೆ ಮಾಹಿತಿ ನೀಡಿದ್ದಾರೆ. ನನ್ನ ಪ್ರಕಾರ ಈ ಪ್ರಕರಣ ನಮಗೆ ಬರಲು ಸಾಧ್ಯವಿಲ್ಲ” ಎಂದು ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.

ಈ ಸಂದೇಶಕ್ಕೆ ಉತ್ತರಿಸಿದ ಅರ್ನಬ್‌ “ಡಿಶ್‌ ಎಫ್‌ಟಿಎ ಕುರಿತ ವಿಚಾರವಾಗಿರಬಹುದು, ಅದು ನಾನು ಪಕ್ಕಕ್ಕಿಟ್ಟಿದ್ದೇನೆ ಎಂದು ರಾಥೋಡ್‌ ನನ್ನೊಂದಿಗೆ ಹೇಳಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾಗಿ ವರದಿ ತಿಳಿಸಿದೆ. ಇಲ್ಲಿ ರಾಥೋಡ್‌ ಅಂದಿದ್ದು, ಅಂದಿನ ಕೇಂದ್ರ ಮಾಹಿತಿಮತ್ತು ಪ್ರಸಾರ ಇಲಾಖೆಯ ಸಚಿವರಾಗಿದ್ದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಆಗಿರುವ ಸಾಧ್ಯತೆಯು ಹೆಚ್ಚಾಗಿದೆ ಎಂದು newslaundry.com ವರದಿ ತಿಳಿಸಿದೆ. ಬೇರೆ ಬೇರೆ ವಿಚಾರಗಳ ಕುರಿತು ಮಾತನಾಡುವಾಗಲೆಲ್ಲಾ ರಾಜ್ಯವರ್ಧನ್‌ ರನ್ನು ಅರ್ನಬ್‌ ರಾಥೋಡ್‌ ಎಂದೇ ಸಂಭೋದಿಸುತ್ತಿದ್ದದ್ದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಬಹುಕೋಟಿ ಹಗರಣದ ಪ್ರಕರಣವನ್ನು ʼಪಕ್ಕಕ್ಕಿಟ್ಟಿದ್ದೇನೆʼಅನ್ನುವುದರ ಅರ್ಥವೇನು? ಅರ್ನಬ್‌ ಒಡೆತನದ ರಿಪಬ್ಲಿಕ್‌ ಟಿವಿಯು ಬಹುಕೋಟಿ ವಂಚನೆ ಮಾಡಿದ ವಿಚಾರವು ಸರಕಾರಕ್ಕೆ ತಿಳಿದಿದೆ ಎಂದು ಸ್ವತಃ ರಾಜ್ಯವರ್ಧನ್‌ ರಾಥೋಡ್‌ ಅರ್ನಬ್‌ ಗೆ ಮಾಹಿತಿ ನೀಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಲ್ಲದೇ ಪ್ರಮುಖವಾಗಿ ಸಚಿವರೇ ಈ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಅನ್ನುವ ಬಲವಾದ ಅನುಮಾನಗಳು ಮೂಡುತ್ತಿವೆ. ಈ ನಡುವೆ ಪ್ರಕರಣ ನಡೆದು ನಾಲ್ಕು ವರ್ಷಗಳೇ ಕಳೆದರೂ ಇದುವರೆಗೂ ರಿಪಬ್ಲಿಕ್‌ ಟಿವಿ ಆಗಲಿ ಝೀ ಮೀಡಿಯಾ ವಿರುದ್ಧವಾಗಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಸರಕಾರಕ್ಕೆ ಬಹುಕೋಟಿಗಳ ನಷ್ಟವೂ ಉಂಟಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News