ಅಮೆರಿಕ: ಮತ್ತೆ ಹಿಂಸಾಚಾರಕ್ಕೆ ಸಂಚು?

Update: 2021-01-17 17:14 GMT

 ವಾಶಿಂಗ್ಟನ್,ಜ.17: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕಾರಕ್ಕೆ ದಿನಗಣನೆ ಆರಂಭವಾಗಿರುವಂತೆಯೇ, ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ವಿವಿಧ ರಾಜ್ಯಗಳ ಶಾಸನಸಭಾ ಭವನಗಳ ಬಳಿ ಸೋಮವಾರ ಪ್ರತಿಭಟನೆ ನಡೆಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅಲ್ಲೆಲ್ಲಾ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಯಿದೆ ಎಂದು ಕಾನೂನು ಅನುಷ್ಠಾನ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಡೊನಾಲ್ಡ್‌ ಟ್ರಂಪ್ ಎರಡನೇ ಅವಧಿಗೆ ಅಧಿಕಾರಕ್ಕೇರುವುದನ್ನು ತಡೆಯಲು ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆ ನಡೆಸಲಾಗಿದೆಯೆಂಬ ಆಧಾರರಹಿತ ಆರೋಪಗಳನ್ನು ಟ್ರಂಪ್ ಬೆಂಬಲಿಗರು ಮಾಡುತ್ತಿದ್ದಾರೆ.

ಶನಿವಾರವೂ ಅಮೆರಿಕದ ಕೆಲವೆಡೆ ಟ್ರಂಪ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಆದರೆ ರಾಜ್ಯಗಳ ಶಾಸನಸಭೆಯ ಆವರಣಗಳಲ್ಲಿ ಯಾವುದೇ ಪ್ರದರ್ಶನಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಟ್ರಂಪ್ ಬೆಂಬಲಿಗರ ಪ್ರತಿಭಟನೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಅಮೆರಿಕದ ಹಲವಾರು ರಾಜ್ಯಗಳು ತಮ್ಮ ಶಾಸನಸಭೆಗಳ ಕಟ್ಟಡಗಳ ಸುತ್ತಲೂ ತಡೆಬೇಲಿಗಳನ್ನು ನಿರ್ಮಿಸಿವೆ. ಕೆಂಟಕಿ, ಟೆಕ್ಸಾಸ್ ರಾಜ್ಯಗಳು ಈಗಾಗಲೇ ತಮ್ಮ ಶಾಸನಭವನದ ಮೈದಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ಈಗಾಗಲೇ ನಿಷೇಧಿಸಿವೆ. ಕನೆಕ್ಟಿಕಟ್ ರಾಜ್ಯಾಡಳಿತ ಕೂಡಾ ಟ್ರಂಪ್ ಬೆಂಬಲಿಗರ ಪ್ರತಿಭಟನೆಯನ್ನು ನಿಯಂತ್ರಿಸಲು ಶಾಸನಸಭೆಯ ಸಂಕೀರ್ಣದ ಆವರಣದಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ)ಯನ್ನು ನಿಯೋಜಿಸಿದೆ.

ಜನವರಿ 20ರಂದು ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ರಾಜಧಾನಿ ವಾಶಿಂಗ್ಟನ್‌ನಲ್ಲಿ ಭದ್ರತಾಪಡೆಗಳ ಸರ್ಪಗಾವಲು ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News