ಅಮೆರಿಕ ಸಂಸತ್‌ ಭವನದ ಬಳಿ ಭಾರೀ ಶಸ್ತ್ರಾಸ್ತ್ರ ಸಜ್ಜಿತ ವ್ಯಕ್ತಿಯ ಬಂಧನ

Update: 2021-01-17 17:34 GMT

ವಾಶಿಂಗ್ಟನ್,ಜ.17: ಭಾರೀ ಶಸ್ತ್ರಾಸ್ತ್ರಗಳಿಂದ ಸಜ್ಜಿತನಾಗಿದ್ದ ವ್ಯಕ್ತಿಯೊಬ್ಬನನ್ನು ಅಮೆರಿಕದ ಸಂಸತ್‌ಭವನ ಕ್ಯಾಪಿಟೊಲ್‌ಸಮೀಪದ ಭದ್ರತಾ ತಪಾಸಣಾ ಠಾಣೆಯೊಂದರ ಬಳಿ ಶನಿವಾರ ಬಂಧಿಸಲಾಗಿದೆ. ನಕಲಿ ಪರಿಚಯಪತ್ರವನ್ನು ಬಳಸಿಕೊಂಡು ಆತ ಬುಧವಾರದಂದು ಜೋ ಬೈಡನ್ ಅವರ ಪ್ರಮಾಣವಚನ ಸಮಾರಂಭ ನಡೆಯಲಿರುವ ಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದ್ದೆರೆಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಶಸ್ತ್ರಧಾರಿಯನ್ನು ವೆಸ್ಲೆ ಆಲೆನ್ ಬೀಲರ್ ಎಂದು ಗುರುತಿಸಲಾಗಿದ್ದು, ಆತ ಶುಕ್ರವಾರ ಸಂಜೆ ತಪಾಸಣಾ ಠಾಣೆಯವರೆಗೆ ಪಿಕ್‌ಅಪ್ ಟ್ರಕ್ ಚಲಾಯಿಸಿಕೊಂಡು ಬಂದಿದ್ದು ಹಾಗೂ ಅಲ್ಲಿದ್ದ ಭದ್ರತಾ ಅಧಿಕಾರಿಗಳಿಗೆ ನಕಲಿ ದಾಖಲೆಪತ್ರವನ್ನು ಸಲ್ಲಿಸಿದ್ದನೆಂದು ತಿಳಿದುಬಂದಿದೆ.

ಆದರೆ, ಆ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿಯಿರುವ ವ್ಯಕ್ತಿಗಳ ಪಟ್ಟಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಬೀಲರ್‌ನ ಪಿಕ್‌ಅಪ್ ಟ್ರಕ್‌ನಲ್ಲಿರುವ ರೈಫಲ್‌ನ ಚಿತ್ರ ಹಾಗೂ ಅಸಾಲ್ಟ್ ಲೈಫ್ (ದಾಳಿಯ ಬದುಕು) ‘‘ ನಿಮ್ಮ ಬಂದೂಕುಗಳನ್ನು ಕಿತ್ತು ಕೊಳ್ಳಲು ಬಂದಲ್ಲಿ, ಅವರಿಗೆ ಮೊದಲು ಬುಲೆಟ್‌ಗಳನ್ನು ನೀಡಿ’’ ಎಂಬ ಪ್ರಚೋದನಕಾರಿ ಬರಹವಿದ್ದುದನ್ನು ಕಂಡು, ಸಂಶಯಗೊಂಡರು.

ಆರೋಪಿ ಬೀಲರ್‌ನನ್ನು ವಿಚಾರಣೆಗೊಳಪಡಿಸಿದಾಗ ತನ್ನ ವಾಹನದಲ್ಲಿ ಅತ್ಯಾಧುನಿಕ ಗ್ಲೋಕ್ ಹ್ಯಾಂಡ್‌ಗನ್ ಇರುವುದಾಗಿ ತಿಳಿಸಿದನು. ಬಳಿಕ ಪೊಲೀಸರು ವಾಹನವನ್ನು ಶೋಧಿಸಿದಾಗ ಅದರಲ್ಲಿ 500 ಸುತ್ತುಗಳ ಕಾಡತೂಸು, ಶಾಟ್‌ಗನ್ ಶೆಲ್‌ಗಳು ಹಾಗೂ ಬಂದೂಕಿನ ಮ್ಯಾಗಝಿನ್ ಪತ್ತೆಯಾಗಿರುವುದಾಗಿ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News