“ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ರಾಜಕಾರಣಿಗಳು ನೇಮಕ ಮಾಡುತ್ತಾರೆ” ಎಂದ ‘ತುಘ್ಲಕ್’ ಸಂಪಾದಕರ ವಿರುದ್ಧ ಕೇಸ್

Update: 2021-01-18 11:32 GMT

ಚೆನ್ನೈ,ಜ.18: ಪೊಂಗಲ್ ದಿನದಂದು ಮಾಡಿದ್ದ ಭಾಷಣದಲ್ಲಿ  ನ್ಯಾಯಾಧೀಶರನ್ನು ಅವಮಾನಿಸಿದ್ದಾರೆಂದು ಆರೋಪಿಸಿ ದಾಖಲಾದ ದೂರಿನ ಹಿನ್ನೆಲೆಯಲ್ಲಿ ತಮಿಳು ಮ್ಯಾಗಝಿನ್ ತುಘ್ಲಕ್‍ನ  ಸಂಪಾದಕ  ಎಸ್  ಗುರುಮೂರ್ತಿ ಆವರ ವಿರುದ್ಧ ತಿರುನೆಲ್ವೇಲಿ ಪೊಲೀಸರು ಸಿಎಸ್‍ಆರ್ (ಕಮ್ಯುನಿಟಿ ಸರ್ವಿಸ್ ರಿಜಿಸ್ಟರ್) ದೂರು ದಾಖಲಿಸಿದ್ದಾರೆ. ಚೋ ರಾಮಸ್ವಾಮಿ ಅವರು ಆರಂಭಿಸಿದ್ದ ತುಘ್ಲಕ್ ಮ್ಯಾಗಜೀನ್‍ನ ಪ್ರಸಕ್ತ ಸಂಪಾದಕ ಗುರುಮೂರ್ತಿ ಲೆಕ್ಕ ಪರಿಶೋಧಕರೂ ಆಗಿದ್ದಾರೆ.

ಚೇರಣಮಹಾದೇವಿ ಎಂಬಲ್ಲಿನ ವಕೀಲ ರಾಜಾ ಗೋಪಾಲ್ ಹಾಗೂ ಸ್ಥಳೀಯ ಬಾರ್ ಅಸೋಸಿಯೇಶನ್‍ನ  ಇತರ ಮೂವರು ಜನವರಿ 16ರಂದು ದೂರು ದಾಖಲಿಸಿದ್ದರು.

ನ್ಯಾಯಾಧೀಶರುಗಳು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಸೇವೆಗೆ ಭಡ್ತಿ ಪಡೆಯಲು ರಾಜಕಾರಣಿಗಳ ಬೆಂಬಲ ಕೋರುತ್ತಿದ್ದಾರೆ ಎಂದು ಜನವರಿ 14ರಂದು ತುಘ್ಲಕ್ ಆಯೋಜಿಸಿದ್ದ ಸಮಾರಂಭದಲ್ಲಿ ಗುರುಮೂರ್ತಿ ಹೇಳಿದ್ದಾರೆಂದು ಆರೋಪಿಸಲಾಗಿದೆ.

"ನ್ಯಾಯಾಲಯಗಳ ಹಾಗೂ ಸುಪ್ರೀಂ ಕೋರ್ಟ್‍ನ ಎಲ್ಲಾ ನ್ಯಾಯಾಧೀಶರುಗಳನ್ನು ರಾಜಕಾರಣಿಗಳು ನೇಮಕಗೊಳಿಸಿದ್ದಾರೆ.  ಇಂತಹ ಹಲವು ಜನರು  ನ್ಯಾಯಾಧೀಶರಾಗಲು ಮಧ್ಯವರ್ತಿಗಳ ಮೂಲಕ ಕೆಲ ಪ್ರಭಾವಿಗಳ ಕಾಲಿಗೆ ಬೀಳುತ್ತಾರೆ. ಇದು ನಾಚಿಕೆಗೇಡು. ಅರ್ಹತೆಯ ಆಧಾರದಲ್ಲಿ ನ್ಯಾಯಾಧೀಶರುಗಳ ನೇಮಕವಾಗಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ" ಎಂದು ಸಮಾರಂಭದಲ್ಲಿ ಗುರುಮೂರ್ತಿ ಹೇಳಿದ್ದರು. ಅವರು ತಮಿಳಿನಲ್ಲಿ ಹೀಗೆ ಹೇಳಿದ್ದ ಸಂದರ್ಭ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಬಿಜೆಪಿ ನಾಯಕ ಎಚ್ ರಾಜಾ ಕೂಡ ಉಪಸ್ಥಿತರಿದ್ದರು.

ಜನವರಿ 16ರಂದು ಗುರುಮೂರ್ತಿ ತಮ್ಮ ಹೇಳಿಕೆಗೆ ವಿಷಾಧಿಸಿದ್ದರಲ್ಲದೆ ಆವೇಶದ ಭರದಲ್ಲಿ ತಾವು ಹಾಗೆ ಹೇಳಿದ್ದಾಗಿ ತಿಳಿಸಿದ್ದರು. ʼನ್ಯಾಯಾಧೀಶರ ಹುದ್ದೆಗೆ ಅರ್ಜಿದಾರರುʼ ಎಂದು ಹೇಳುವ ಬದಲು ʼನ್ಯಾಯಾಧೀಶರುʼ ಎಂದು ಹೇಳಿದ್ದೆ ಎಂದೂ ಅವರು ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News