ಅರುಣಾಚಲ ಪ್ರದೇಶದಲ್ಲಿ 101 ಮನೆಗಳಿರುವ ‘ಗ್ರಾಮ’ ನಿರ್ಮಿಸಿದ ಚೀನಾ: ಸಾಬೀತುಪಡಿಸಿದ ಉಪಗ್ರಹ ಚಿತ್ರಗಳು

Update: 2021-01-18 17:21 GMT

ಹೊಸದಿಲ್ಲಿ,ಜ.18: ಅರುಣಾಚಲ ಪ್ರದೇಶದಲ್ಲಿ ಸುಮಾರು 101 ಮನೆಗಳಿರುವ ಹೊಸ ಗ್ರಾಮವನ್ನು ಚೀನಾ ನಿರ್ಮಿಸಿರುವುದನ್ನು ತೋರಿಸುವ ಉಪಗ್ರಹ ಚಿತ್ರಗಳು ತನಗೆ ದೊರಕಿವೆ ಎಂದು ndtv.com ವರದಿ ಮಾಡಿದೆ. ನವೆಂಬರ್ 1, 2020 ದಿನಾಂಕ ನಮೂದಿಸಲ್ಪಟ್ಟಿರುವ ಈ ಉಪಗ್ರಹ ಚಿತ್ರಗಳನ್ನು ಹಲವಾರು ತಜ್ಞರು ವಿಶ್ಲೇಷಿಸಿದ್ದಾರೆಂದೂ ಎನ್‍ಡಿಟಿವಿ ಹೇಳಿದೆ.  ಭಾರತ-ಚೀನಾ ನಡುವಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಬಳಿಯ ಭಾರತೀಯ ಭೂಭಾಗದಲ್ಲಿ ನಿರ್ಮಾಣಗೊಂಡಿರುವ ಈ ಗ್ರಾಮದ ವಿಸ್ತೀರ್ಣ ಅಂದಾಜು  4.5 ಕಿಮೀ ಆಗಿದೆ.

ತ್ಸಾರು ಚು ನದಿ ದಂಡೆ ಪ್ರದೇಶದಲ್ಲಿರುವ ಈ ಗ್ರಾಮ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿದ್ದು ಇದು ಭಾರತ-ಚೀನಾ ನಡುವಿನ ವಿವಾದಿತ ಪ್ರದೇಶಗಳಲ್ಲೊಂದಾಗಿದೆ. ಆಗಸ್ಟ್ 26, 2019ರ ಉಪಗ್ರಹ ಚಿತ್ರದಲ್ಲಿ ಅಲ್ಲಿ ಯಾವುದೇ ಗ್ರಾಮದ ಕುರುಹು ಇರಲಿಲ್ಲ. ಆದುದರಿಂದ ಈ ಗ್ರಾಮ ಕಳೆದ ವರ್ಷ ನಿರ್ಮಾಣವಾಗಿರಬೇಕೆಂದು ಅಂದಾಜಿಸಲಾಗಿದೆ.

ಎನ್‍ಡಿಟಿವಿ ಈ ಉಪಗ್ರಹ ಚಿತ್ರಗಳನ್ನು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿ ಪ್ರತಿಕ್ರಿಯೆ ಕೇಳಿದಾಗ ಎನ್‍ಡಿಟಿವಿ ವರದಿಯನ್ನು ಸಚಿವಾಲಯ ಅಲ್ಲಗಳೆದಿಲ್ಲ. "ಗಡಿ ಪ್ರದೇಶಗಳಲ್ಲಿ ಚೀನಾ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಕುರಿತಂತೆ  ಇತ್ತೀಚಿಗಿನ ವರದಿಗಳನ್ನು ನೋಡಿದ್ದೇವೆ.  ಹಿಂದೆ ಕೂಡ ಚೀನಾ ಇಂತಹ ನಿರ್ಮಾಣ ಕೆಲಸ ನಡೆಸಿದೆ" ಎಂದಷ್ಟೇ ಹೇಳಿದ್ದಾಗಿ ndtv.com ವರದಿ ತಿಳಿಸಿದೆ.

"ಗಡಿ ಪ್ರದೇಶದಲ್ಲಿನ ಮೂಲಭೂತ ಸೌಲಭ್ಯ ಉತ್ತಮ ಪಡಿಸಲು ಸರಕಾರ ಬದ್ಧವಾಗಿದೆ. ಗಡಿ ಪ್ರದೇಶದ ಜನರಿಗೆ ಅನುಕೂಲವಾಗಲು ಅಲ್ಲಿ ರಸ್ತೆ, ಸೇತುವೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ" ಎಂದು ಸರಕಾರ ಹೇಳಿದೆ. ಆದರೆ ಗ್ರಾಮದ ನಿರ್ಮಾಣಕ್ಕೆ ಆಕ್ಷೇಪ ಸೂಚಿಸಲಾಗಿದೆಯೇ ಎಂಬ ಪ್ರಶ್ನೆಗೆ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿಲ್ಲ.

ಎನ್‍ಡಿಟಿವಿ ಈ ಉಪಗ್ರಹ ಚಿತ್ರಗಳನ್ನು ಪ್ರಾನೆಟ್ ಲ್ಯಾಬ್ಸ್ ಇಂಕ್ ಮೂಲಕ ಪಡೆದಿದೆ ಎಂದು ಹೇಳಿದೆ. ಭಾರತ ಸರಕಾರ ತನ್ನ ಅಧಿಕೃತ ನಕ್ಷೆ ಎಂದು ಬಳಸುವ  ಸರ್ವೇಯರ್ ಜನರಲ್ ಆಫ್ ಇಂಡಿಯಾದ ಆನ್ಲೈನ್ ನಕ್ಷೆಯಲ್ಲೂ ಚೀನಾದ ಈ ಗ್ರಾಮ ಭಾರತದ ಭೂಭಾಗದಲ್ಲಿರುವುದು ಕಾಣಿಸುತ್ತದೆ ಎಂದು ವರದಿ ಉಲ್ಲೇಖಿಸಿದೆ.

ವರದಿ ಗಮನಿಸಿದ್ದೇವೆ: ವಿದೇಶ ವ್ಯವಹಾರ ಇಲಾಖೆ

ಅರುಣಾಚಲ ಪ್ರದೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಚೀನಾ ನಿರ್ಮಾಣ ಕಾಮಗಾರಿ ನಡೆಸುತ್ತಿದೆ ಎಂಬ ವರದಿಯನ್ನು ಗಮನಿಸಿದ್ದೇವೆ ಎಂದು ವಿದೇಶ ವ್ಯವಹಾರ ಇಲಾಖೆ ಹೇಳಿದೆ. ತನ್ನ ಭದ್ರತೆ ಮತ್ತು ಸುರಕ್ಷತೆಗೆ ಪರಿಣಾಮ ಬೀರಬಹುದಾದ ಎಲ್ಲಾ ಬೆಳವಣಿಗೆಯನ್ನೂ ಭಾರತ ನಿರಂತರವಾಗಿ ಎಚ್ಚರಿಕೆಯಿಂದ ವೀಕ್ಷಿಸುತ್ತಿದೆ. ಚೀನಾವು ಗಡಿ ಭಾಗದಲ್ಲಿ ಈ ರೀತಿಯ ಮೂಲಸೌಕರ್ಯ ಅಭಿವೃದ್ಧಿ ಕಾರ್ಯವನ್ನು ಹಲವು ವರ್ಷಗಳಿಂದ ನಡೆಸುತ್ತಾ ಬಂದಿದೆ ಎಂದು ವಿದೇಶ ವ್ಯವಹಾರ ಇಲಾಖೆಯ ಹೇಳಿಕೆ ತಿಳಿಸಿದೆ. ಇಂತಹ ಬೆಳವಣಿಗೆಯ ಮೇಲೆ ನಿಗಾ ಇರಿಸುವ ಜೊತೆಗೆ, ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ರಕ್ಷಣೆಗೆ ಅಗತ್ಯದ ಕ್ರಮಗಳನ್ನು ಭಾರತ ಕೈಗೊಳ್ಳುತ್ತದೆ. ಜತೆಗೆ, ಅರುಣಾಚಲ ಸೇರಿದಂತೆ ಗಡಿಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿ ನಾಗರಿಕರ ಜೀವನೋಪಾಯ ಸುಧಾರಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News