ಶೌಚಾಲಯಗಳಿಲ್ಲದ ಸರಕಾರಿ ಶಾಲೆಗಳು

Update: 2021-01-19 05:10 GMT

ಕರ್ನಾಟಕ ಅಭಿವೃದ್ಧಿಯಲ್ಲಿ ದಾಪುಗಾಲಿಡುತ್ತಿದೆ ಎಂದು ನಮ್ಮ ರಾಜ್ಯದ ಅಧಿಕಾರ ಸೂತ್ರ ಹಿಡಿದವರೆಲ್ಲ ಹೇಳುತ್ತಲೇ ಬಂದಿದ್ದಾರೆ. ಈಗ ಸರಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನಾಯಕರಂತೂ ಸ್ವರ್ಗವನ್ನೇ ಧರೆಗೆ ತಂದವರಂತೆ ಮಾತಾಡುತ್ತಿದ್ದಾರೆ. ರವಿವಾರ ಬೆಳಗಾವಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘‘ಪ್ರಧಾನಿ ಮೋದಿ ನೇತೃತ್ವದ ಸರಕಾರ ಕರ್ನಾಟಕಕ್ಕೆ ಯಾರೂ ನೀಡದಷ್ಟು ಕೊಡುಗೆಯನ್ನು ನೀಡಿದೆ’’ ಎಂದು ಭಿಕ್ಷೆ ಹಾಕಿದವರಂತೆ ಮಾತಾಡಿ ಹೋಗಿದ್ದಾರೆ. ತೆರಿಗೆ ರೂಪದಲ್ಲಿ ಕರ್ನಾಟಕದಿಂದ ಕೇಂದ್ರಕ್ಕೆ ಎಷ್ಟು ಹಣ ಹೋಗಿದೆಯೆಂದು ಅವರು ಹೇಳಿಲ್ಲ. ಇರಲಿ, ಆದರೆ ಇಷ್ಟೆಲ್ಲ ಮುಂದುವರಿದ ರಾಜ್ಯದ ಸರಕಾರಿ ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರು ಮುಂತಾದ ಮೂಲ ಸೌಕರ್ಯಗಳಿಲ್ಲ ಎಂಬುದು ನಾಗರಿಕ ಸಮಾಜ ನಾಚಿಕೆ ಪಡಬೇಕಾದ ಸಂಗತಿಯಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ 16 ಶೈಕ್ಷಣಿಕ ಜಿಲ್ಲೆಗಳಲ್ಲಿರುವ 6 ಸಾವಿರ ಶಾಲೆಗಳಲ್ಲಿ ಕುಡಿಯುವ ನೀರಿನ ಕೊರತೆಯಿದೆ. ಒಂಭತ್ತು ಸಾವಿರ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಇದನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಒಪ್ಪಿಕೊಂಡಿದ್ದಾರೆ. ಈ ಕೊರತೆ ನಿವಾರಿಸುವ ಭರವಸೆ ನೀಡಿದ್ದಾರೆ.

 ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದು ತುಂಬಾ ಹಳೆಯ ಸಂಗತಿ. ಈವರೆಗೆ ಈ ರಾಜ್ಯವನ್ನು ಆಳಿದ ಸರಕಾರಗಳು ಈ ಕೊರತೆಯನ್ನು ನಿವಾರಿಸಲು ಆದ್ಯತೆ ನೀಡಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಈಗ ಶೌಚಾಲಯ ಮತ್ತು ಕುಡಿಯುವ ನೀರಿನ ಕೊರತೆಯಿರುವ ಶಾಲೆಗಳ ಪಟ್ಟಿಯನ್ನು ಕಳಿಸಿಕೊಡುವಂತೆ ಶಿಕ್ಷಣ ಇಲಾಖೆಯ ಎಲ್ಲಾ ಉಪ ನಿರ್ದೇಶಕರಿಗೆ ಸರಕಾರ ಕೇಳಿದ ನಂತರ ಈ ಸಂಗತಿ ಬೆಳಕಿಗೆ ಬಂದಿದೆ. ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮನೆಯಿಂದಲೇ ನೀರು ಒಯ್ಯಬೇಕಾಗಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಭಾರದ ಜೊತೆಗೆ ನೀರನ್ನೂ ಹೊತ್ತುಕೊಂಡು ಒಯ್ಯುವುದು ಆತಂಕದ ಸಂಗತಿಯಾಗಿದೆ. ಇದು ಕುಡಿಯುವ ನೀರಿನ ಸಮಸ್ಯೆಯಾದರೆ ಇನ್ನು ಶಾಲೆಗಳ ಮಹಿಳಾ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಶೌಚಾಲಯಕ್ಕಾಗಿ ಶಾಲೆಗಳ ಸಮೀಪದಲ್ಲಿ ಇರುವ ಮನೆಗಳಿಗೆ ಹೋಗಬೇಕಾಗುತ್ತದೆ. ಶಾಲೆಗಳು ಊರಿನಿಂದ ದೂರದಲ್ಲಿ ಇದ್ದರೆ, ಅಕ್ಕಪಕ್ಕ ಮನೆಗಳಿರದಿದ್ದರೆ ಶಾಲೆ ಬಿಡುವವರೆಗೆ ಕಾದು ಮನೆಗೆ ಬಂದು ದೈಹಿಕ ಬಾಧೆ ತೀರಿಸಿಕೊಳ್ಳಬೇಕಾಗುತ್ತದೆ. ಇದು ಅಭಿವೃದ್ಧಿ ಹೊಂದಿದ ರಾಜ್ಯವೊಂದಕ್ಕೆ ಶೋಭೆ ತರುವ ವಿಷಯವಲ್ಲ. ಈ ಉದ್ದೇಶಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ಬರುತ್ತದೆ. ಆದರೆ ಆ ಅನುದಾನ ಬಂದರೂ ಅನುಷ್ಠಾನದ ಕೊರತೆ ಎದ್ದು ಕಾಣುತ್ತದೆ.

ನಮ್ಮ ರಾಜ್ಯದಲ್ಲಿ ಹಣಕಾಸಿನ ಕೊರತೆಯೇನೂ ಇಲ್ಲ. ಎಲ್ಲೋ ದೂರದ ಊರಿನಲ್ಲಿ ಮಂದಿರವೊಂದರ ನಿರ್ಮಾಣಕ್ಕಾಗಿ ಲಕ್ಷಾಂತರ ರೂಪಾಯಿ ದೇಣಿಗೆ ನೀಡುವ ಮಠಾಧೀಶರು, ಧರ್ಮದರ್ಶಿಗಳು, ಉದ್ಯಮಪತಿಗಳು, ರಾಜಕಾರಣಿಗಳು ನಮ್ಮಲ್ಲಿದ್ದಾರೆ. ಪಾದಯಾತ್ರೆ ಮಾಡಿ ಹಣ ಸಂಗ್ರಹಿಸಿ ಕಳಿಸುತ್ತಿದ್ದಾರೆ. ಕೆಲ ಪೀಠಾಧಿಪತಿಗಳಂತೂ ಇಪ್ಪತೈದು ಲಕ್ಷ ರೂಪಾಯಿ ವರೆಗೆ ನಿಧಿ ನೀಡಿದ್ದಾರೆ. ಇಂತಹ ಉದಾರ ಹೃದಯಿಗಳು ತಮ್ಮದೇ ರಾಜ್ಯದ ಸರಕಾರಿ ಶಾಲೆಗಳ ಮಕ್ಕಳು ಕುಡಿಯುವ ನೀರಿಗಾಗಿ ಯಾತನೆ ಪಡುತ್ತಿರುವುದು, ಹೆಣ್ಣುಮಕ್ಕಳು ಶೌಚಾಲಯಕ್ಕಾಗಿ ಪರದಾಡುತ್ತಿರುವುದನ್ನು ಕಂಡೂ ಕಾಣದಂತೆ ಇರಬಾರದು. ಎಲ್ಲವನ್ನೂ ಸರಕಾರ ಮಾಡಬೇಕೆಂದಿಲ್ಲ. ಮಂದಿರಕ್ಕೆ ನೀಡುವ ದೇಣಿಗೆಯ ಕಾಲು ಭಾಗದಷ್ಟು ಹಣವನ್ನಾದರೂ ಸರಕಾರಿ ಶಾಲೆಗಳ ಮಕ್ಕಳ ಕುಡಿಯುವ ನೀರಿನ ಹಾಗೂ ಶೌಚಾಲಯದಂತಹ ಮೂಲ ಸೌಕರ್ಯಗಳ ಸಲುವಾಗಿ ವಿನಿಯೋಗಿಸಲಿ.

ಮಠ, ಮಂದಿರ, ಮಸೀದಿ, ಚರ್ಚ್ ಯಾವುದೇ ಧರ್ಮದ ಪ್ರಾರ್ಥನಾ ಸ್ಥಳವಿರಲಿ ಅವುಗಳಿಗೆ ಜನರಿಂದಲೇ ಹಣ ಹರಿದು ಬರುತ್ತದೆ. ಆ ಹಣ ಉದಾತ್ತ ಉದ್ದೇಶಗಳಿಗಾಗಿ ಬಳಕೆಯಾಗಲಿ. ಮಠ, ಮಂದಿರ, ಮಸೀದಿ, ದರ್ಗಾ, ಚರ್ಚ್, ಬಸದಿ ಬೇಡವೆಂದಲ್ಲ. ಮನುಷ್ಯನ ಅದರಲ್ಲೂ ನಂಬಿದವರ ಆತ್ಮೋನ್ನತಿಗೆ, ನೆಮ್ಮದಿಯ ಸಲುವಾಗಿ ಅವುಗಳು ಬೇಕು. ಅವುಗಳ ಜೊತೆಗೆ ಇಂತಹ ಸಮುದಾಯದ ಏಳಿಗೆಗೂ ದೇವರ ಹುಂಡಿಯ ಹಣ ಸದ್ಬಳಕೆಯಾಗಬೇಕು. ನಮ್ಮ ಮಠಾಧೀಶರು, ಧರ್ಮದರ್ಶಿಗಳು ಇಂತಹ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಿ. ಈ ನಿಟ್ಟಿನಲ್ಲಿ ಅಝೀಮ್ ಪ್ರೇಮ್‌ಜಿ ಫೌಂಡೇಶನ್ ಮತ್ತು ಇನ್ಫೋಸಿಸ್ ಸುಧಾ ಮೂರ್ತಿ ಅವರು ತಮ್ಮ ಇತಿಮಿತಿಯಲ್ಲಿ ಒಂದಿಷ್ಟು ಕೆಲಸ ಮಾಡಿದ್ದಾರೆ ಎಂಬುದು ಶ್ಲಾಘನೀಯ ಸಂಗತಿಯಾಗಿದೆ. ಉಳಿದವರಿಗೆ ಇದು ಮಾದರಿಯಾಗಲಿ.

ಇನ್ನೇನು ಬೇಸಿಗೆ ಆರಂಭವಾಗುತ್ತದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಖರತೆ ತೀವ್ರವಾಗಿರುತ್ತದೆ. ಸನ್‌ಸ್ಟ್ರೋಕ್‌ನಿಂದ ಸಾವುಗಳು ಸಂಭವಿಸುವ ಅಪಾಯವೂ ಇರುತ್ತದೆ. ಹೀಗಾಗಿ ಸರಕಾರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕು. ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಇನ್ನೆರಡು ತಿಂಗಳಲ್ಲಿ ಈ ಕೊರತೆಯನ್ನು ನಿವಾರಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಇದು ಹೇಳಿಕೆಯಾಗಿ ಮಾತ್ರ ಉಳಿಯಬಾರದು, ಕಾರ್ಯಗತವಾಗಬೇಕು. ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು, ಸರಕಾರದ ಅಧಿಕಾರಿಗಳು ತಮ್ಮ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಬೇಕು.

ಕಳೆದ ವರ್ಷ ಕೊರೋನ ಕಾರಣದಿಂದಾಗಿ ಶಾಲೆ, ಕಾಲೇಜುಗಳನ್ನು ಮುಚ್ಚಲಾಯಿತು. ಈಗ ಅದರ ಭೀತಿ ಕಡಿಮೆಯಾಗಿದೆ. ಶಾಲೆಗಳು ಆರಂಭವಾಗಿವೆ. ಆದರೂ ಕೋವಿಡ್ ಆತಂಕ ಸಂಪೂರ್ಣ ಮಾಯವಾಗಿಲ್ಲ. ಕಾರಣ ಶಾಲೆಗಳಿಗೆ ಬರುವ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ನಿಗಾ ವಹಿಸಬೇಕು. ಆಗಾಗ ಕೈ ತೊಳೆಯಲು ಸಾಕಷ್ಟು ನೀರಿನ ವ್ಯವಸ್ಥೆಯೂ ಆಗಬೇಕು. ಶುಚೀಕರಣಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸರಕಾರ ತುರ್ತಾಗಿ ಸರಕಾರಿ ಮಾತ್ರವಲ್ಲ, ಅನುದಾನಿತ ಶಾಲೆಗಳಲ್ಲಿಯೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು.

ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಿಸಲು ಸರಕಾರ ವೇನೋ ಮುಂದಾಗಿದೆ. ಅಗತ್ಯವಿರುವ ಶಾಲೆಗಳಲ್ಲಿ ಮಾತ್ರ ಈ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಸರಕಾರದ ಮೂಲಗಳು ಹೇಳುತ್ತವೆ. ಆದರೆ ಬಹುತೇಕ ಸರಕಾರಿ ಶಾಲೆಗಳಲ್ಲಿ ಇದೇ ಪರಿಸ್ಥಿತಿ ಇರುವುದರಿಂದ ತುರ್ತಾಗಿ ಕುಡಿಯುವ ನೀರು ಮತ್ತು ಶೌಚಾಲಯ ಸೌಕರ್ಯಗಳನ್ನು ಕಲ್ಪಿಸುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News