'ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನಿಗಳುʼ: ಸುಳ್ಳು ಹರಡಲು ಪ್ರಾರಂಭಿಸಿದ್ದು ಪಾಕಿಸ್ತಾನ, ಹಂಚಿದ್ದು ಮಾಧ್ಯಮಗಳು!

Update: 2021-01-19 13:03 GMT

ಹೊಸದಿಲ್ಲಿ,ಜ.19: ಕೇಂದ್ರದ ನೂತನ ಕೃಷಿ ಕಾನೂನುಗಳ ವಾಪಸಾತಿಗೆ ಆಗ್ರಹಿಸಿ ರಾಜಧಾನಿಯ ಗಡಿ ಪ್ರದೇಶಗಳಲ್ಲಿ  ಕಳೆದ 50ಕ್ಕೂ ಅಧಿಕ ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗಳಲ್ಲಿ `ಖಲಿಸ್ತಾನಿಗಳು' ನುಸುಳಿದ್ದಾರೆ ಎಂದು ಸ್ವತಃ ಕೇಂದ್ರ ಸರಕಾರವೇ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮೂಲಕ ಸುಪ್ರೀಂ ಕೋರ್ಟ್‍ಗೆ ಜನವರಿ 12ರಂದು ತಿಳಿಸಿತ್ತು.

ಅಷ್ಟಕ್ಕೂ ರೈತ ಹೋರಾಟಕ್ಕೂ `ಖಲಿಸ್ತಾನಿಗಳಿಗೂ'  ನಂಟು ಇದೆ ಎಂಬ ಆಧಾರರಹಿತ ಆರೋಪಗಳನ್ನು ಕೆಲ ಮುಖ್ಯವಾಹಿನಿ ಮಾಧ್ಯಮಗಳೂ ಬಿಂಬಿಸಲು ಆರಂಭಿಸಿದ್ದವು. ಈ ನಡುವೆ ರೈತ ಹೋರಾಟದಲ್ಲಿ ಭಾಗಿಯಾಗಿರುವ ಹಲವು ನಾಯಕರಿಗೆ ರಾಷ್ಟ್ರೀಯ ತನಿಖಾ ಏಜನ್ಸಿ ಸಮನ್ಸ್ ಕೂಡ ಜಾರಿಗೊಳಿಸಿದೆ.

ಆದರೆ ಈ `ಖಲಿಸ್ತಾನಿ ನಂಟು' ಎಂಬ ಷಡ್ಯಂತ್ರದ ಮೂಲ ಹುಡುಕಲು  thedisinfolab.org ಎಂಬ ನಕಲಿ ಸುದ್ದಿ ಬಯಲುಗೊಳಿಸುವ  ಸಂಸ್ಥೆ ಯತ್ನಿಸಿದೆ. ಈ ಆರೋಪದ ಮೂಲ ಪಾಕಿಸ್ತಾನದಲ್ಲಿದೆ ಹಾಗೂ ಅಲ್ಲಿನ ಸೇನಾ ಪಡೆಗಳ ಮಾಧ್ಯಮ ಮತ್ತು ಪಿ ಆರ್ ಘಟಕವಾದ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಷನ್ಸ್ ಕೆಲ ಸಾಮಾಜಿಕ ಜಾಲತಾಣ ಗುಂಪುಗಳು ಇಂತಹ ಸುದ್ದಿ ಹರಡಿದ್ದವು ಎಂದು newslaundry.com ವರದಿ ತಿಳಿಸಿದೆ.

ನಂತರ  ನಟಿ ವೀಣಾ ಮಲಿಕ್ ಅವರಂತಹ `ಪಾಕಿಸ್ತಾನಿ ಇನ್‍ಫ್ಲೂಯೆನ್ಸರ್'ಗಳು ಇದಕ್ಕೆ ತಮ್ಮ ಪಾಲಿನ ಕೊಡುಗೆ ನೀಡಿದ್ದರು. ಮಲಿಕ್ ಅವರು ಆಗಸ್ಟ್ 15ರಂದು ರೈತನೊಬ್ಬ `ವಿ ವಾಂಟ್ ಖಲಿಸ್ತಾನ್' ಎಂಬ ಪೋಸ್ಟರ್ ಹಿಡಿದಿರುವ  ಚಿತ್ರವನ್ನು ಪೋಸ್ಟ್ ಮಾಡಿ, ತನ್ನ ಸಿಖ್ ರೈತರಿಗೆ ಪ್ರತ್ಯೇಕ  ದೇಶ ಕ್ಕಾಗಿ ಭಾರತೀಯ ನಾಗರಿಕರು ಬೇಡಿಕೆಯಿಡಬೇಕೆಂದು ಬರೆದಿದ್ದರು. ಆದರೆ ವಾಸ್ತವವಾಗಿ ಇದು  ನಕಲಿ ಚಿತ್ರವಾಗಿದ್ದು ಆಪರೇಷನ್ ಬ್ಲೂಸ್ಟಾರ್‍ನ 29ನೇ ವರ್ಷಾಚರಣೆ 2013ರಲ್ಲಿ ನಡೆದಾಗ  ಕ್ಲಿಕ್ಕಿಸಲಾಗಿತ್ತು. ಆದರೂ ಮಲಿಕ್ ಅವರ ಪೋಸ್ಟ್ ಅನ್ನು ನೂರಾರು ಮಂದಿ ರಿಟ್ವೀಟ್ ಮಾಡಿದ್ದರು.

ರೈತ ಪ್ರತಿಭಟನೆ ಆರಂಭಗೊಂಡ ಎರಡನೇ ದಿನ, ನವೆಂಬರ್ 26ರಂದು  ಪ್ರತಿಭಟನಾ ಸ್ಥಳದಲ್ಲಿನ ವೀಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ರೈತನೊಬ್ಬ `ಇಂದ್ರಾ ಟೋಕ್ ದಿ' (ಇಂದಿರಾರನ್ನು  ಉರುಳಿಸಲಾಯಿತು) ಎಂದು 1984ರಲ್ಲಿ ನಡೆದ ಇಂದಿರಾ ಗಾಂಧಿ ಹತ್ಯೆ ಉಲ್ಲೇಖಿಸಿ ಹೇಳುತ್ತಿರುವುದು ಕೇಳಿಸುತ್ತದೆ.

ಝೀ ನ್ಯೂಸ್ ತಡ ಮಾಡದೆ ಇದನ್ನು ಪ್ರಸಾರ ಮಾಡಿತಲ್ಲದೆ ರೈತರ ಪ್ರತಿಭಟನೆಗೆ `ಹಿಂಸಾತ್ಮಕ ಮಂದಿ' ನುಸುಳಿದ್ದಾರೆಂದು ಹೇಳಿತು. ಅದೇ ದಿನ ಸಂಜೆ ಝೀ ಮುಖ್ಯ ಸಂಪಾದಕ ಸುಧೀರ್ ಚೌಧುರಿ ಅವರ ಪ್ರೈಮ್ ಟೈಮ್ ಶೋ ದಲ್ಲಿ #ಆಂದೋಲನ್‍ಮೇಖಲಿಸ್ತಾನ್ ಎಂಬ ಹ್ಯಾಶ್ ಟ್ಯಾಗ್ ಕೂಡ ಬಳಕೆಯಾಯಿತು. ಜತೆಗೆ ರೈತರು ಖಲಿಸ್ತಾನ ಪರ ಘೋಷಣೆಗಳನ್ನು ಕೂಗುತ್ತಿರುವಂತೆ ತೋರಿಸುವ ಪಂಜಾಬ್‍ನ ಬರ್ನಾಲಾದಿಂದ ವೀಡಿಯೊ ಒಂದನ್ನೂ ತೋರಿಸಲಾಯಿತು.

ಇದು ಸಾಲದೆಂಬಂತೆ ಬಿಜೆಪಿ ನಾಯಕರೂ ಖಲಿಸ್ತಾನ ನಂಟು ವಿಚಾರಕ್ಕೆ ಇನ್ನಷ್ಟು  ಬಣ್ಣ ಹಚ್ಚಿದ್ದರು. ನವೆಂಬರ್ 28ರಂದು ಹರಿಯಾಣ  ಸೀಎಂ ಮನೋಹರ ಲಾಲ್ ಖಟ್ಟರ್ ಅವರು ಮಾತನಾಡುತ್ತಾ ಖಲಿಸ್ತಾನಿ ಶಕ್ತಿಗಳು ರೈತ ಹೊರಾಟದಲ್ಲಿ ನುಸುಳಿವೆ ಎಂಬುದಕ್ಕೆ ತಮ್ಮ ಸರಕಾರಕ್ಕೆ ಮಾಹಿತಿಯಿದೆ ಎಂದಿದ್ದರು ಆದರೆ  ಇದರ ಬಗ್ಗೆ ಇಲ್ಲಿಯ ತನಕ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ನವೆಂಬರ್ 29ರಂದು ಉತ್ತರಾಖಂಡ ಬಿಜೆಪಿ ಅಧ್ಯಕ್ಷ ದುಷ್ಯಂತ್ ಕುಮಾರ್ ಗೌತಮ್ ಪತ್ರಿಕಾಗೋಷ್ಠಿ ನಡೆಸಿ  ಪ್ರತಿಭಟನೆಗಳನ್ನು ಖಲಿಸ್ತಾನ ಪರ ಹಾಗೂ ಪಾಕ್ ಪರ  ಶಕ್ತಿಗಳು ಹೈಜಾಕ್ ಮಾಡಿವೆ ಹಾಗೂ ಪ್ರತ್ಯೇಕತಾವಾದಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದಿದ್ದರು.

ಇದು ಸಾಲದೆಂಬಂತೆ ಹಿರಿಯ ಬಿಜೆಪಿ ನಾಯಕ ರಾಮ್ ಜಾಧವ್ ಅವರು "ರೈತರ ದಿಲ್ಲಿ ಯಾತ್ರೆಗೆ ಖಲಿಸ್ತಾನ್ ಕಾರಣವೇ?" ಎಂಬ ಶೀರ್ಷಿಕೆಯ ಲೇಖನ ಟ್ವೀಟ್ ಮಾಡಿದರು.

ಆದರೆ ಇಷ್ಟೆಲ್ಲಾ  ಮಾತುಗಳು ಕೇಳಿ ಬಂದರೂ ಖಲಿಸ್ತಾನಿ ಶಕ್ತಿಗಳು ರೈತರ ಪ್ರತಿಭಟನೆಯಲ್ಲಿ ನುಸುಳಿವೆ ಎಂಬುದಕ್ಕೆ ಇನ್ನೂ ಯಾವುದೇ ಸಾಕ್ಷ್ಯಾಧಾರಗಳು ಮಾತ್ರ ಲಭ್ಯವಾಗಿಲ್ಲ ಎಂಬುದು ವಾಸ್ತವ ಎಂದು newslaundry.com ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News