ಮರಾಠಾ ಮೀಸಲಾತಿ: ಅರ್ಜಿ ವಿಚಾರಣೆಗೆ ಫೆ.5ರಂದು ದಿನ ನಿಗದಿ

Update: 2021-01-20 17:33 GMT

ಹೊಸದಿಲ್ಲಿ, ಜ. 20: ಮರಾಠರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ 2018ರ ಮಹಾರಾಷ್ಟ್ರ ಕಾಯ್ದೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ವೇಳಾಪಟ್ಟಿಯನ್ನು ಫೆಬ್ರವರಿ 5ರಂದು ನಿರ್ಧರಿಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.

ಈ ರೀತಿಯ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ನೇರ ವಿಚಾರಣೆ(ಫಿಸಿಕಲ್ ಹಿಯರಿಂಗ್) ಪ್ರಕ್ರಿಯೆ ಆರಂಭವಾದ ಬಳಿಕ ನಡೆಸುವುದು ಸೂಕ್ತ ಎಂದು ಮಹಾರಾಷ್ಟ್ರ ಸರಕಾರ ವಾದ ಮಂಡಿಸಿತ್ತು. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವರ್ಷದ ಮಾರ್ಚ್‌ನಿಂದ ಈ ಪ್ರಕರಣದ ವಿಚಾರಣೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಯುತ್ತಿದೆ. ಪ್ರಕರಣದ ವಿಚಾರಣೆ ಮುಂದೂಡಿ, ಮಾರ್ಚ್ ಬಳಿಕ ಆರಂಭಿಸುವಂತೆ ಬುಧವಾರ ನಡೆದ ಕಲಾಪದಲ್ಲಿ ಮಹಾರಾಷ್ಟ್ರ ಸರಕಾರದ ಪರ ವಕೀಲ ಮುಕುಲ್ ರೋಹ್ಟಗಿ ಕೋರಿಕೆ ಸಲ್ಲಿಸಿದರು.

ಕೊರೋನ ಸೋಂಕಿನಿಂದಾಗಿ ಈಗ ನೇರ ವಿಚಾರಣೆ ನಡೆಸುವುದು ಅಪಾಯಕಾರಿ. ಕೊರೋನದ ವಿರುದ್ಧದ ಲಸಿಕೆ ಅಭಿಯಾನ ಆರಂಭವಾಗಿದ್ದು 6ರಿಂದ 8 ವಾರದೊಳಗೆ 60ಕ್ಕಿಂತ ಹೆಚ್ಚು ವರ್ಷದ ನ್ಯಾಯಾಧೀಶರಿಗೆ ಹಾಗೂ ವಕೀಲರಿಗೆ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ರೋಹ್ಟಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, 2 ವಾರದ ಬಳಿಕ ವಿಚಾರಣೆಗೆ ದಿನ ನಿಗದಿಗೊಳಿಸುವುದಾಗಿ ಹೇಳಿ ಮುಂದಿನ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News