ಕೋರ್ಟ್ ಆದೇಶವಿದ್ದರೂ ಆರೋಪಪಟ್ಟಿ ಇ-ಪ್ರತಿ ಪರಿಶೀಲನೆಗೆ ಅವಕಾಶವಿಲ್ಲ: ಆರೋಪಿಗಳ ದೂರು

Update: 2021-01-20 17:51 GMT

ಹೊಸದಿಲ್ಲಿ, ಜ.20: ದಿಲ್ಲಿ ಹಿಂಸಾಚಾರ ಪ್ರಕರಣದ ಆರೋಪಿಗಳಿಗೆ ಜೈಲಿನಲ್ಲಿರುವ ಕಂಪ್ಯೂಟರ್‌ನಲ್ಲಿ ಆರೋಪಪಟ್ಟಿ ಓದಲು ಸಾಕಷ್ಟು ಸಮಯಾವಕಾಶ ನೀಡುತ್ತಿಲ್ಲ ಎಂದು ದಿಲ್ಲಿಯ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಪೊಲೀಸರು 18,000 ಪುಟಗಳ ಆರೋಪಪಟ್ಟಿಯನ್ನು ಕಂಪ್ಯೂಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದನ್ನು ಓದಲು ಆರೋಪಿಗಳಿಗೆ ಸಮಾನ ಕಾಲಾವಕಾಶ ನೀಡುತ್ತಿಲ್ಲ. ತನಗೆ ಕೆಲವೊಮ್ಮೆ ಒಂದು ದಿನದಲ್ಲಿ 3 ಗಂಟೆ ಅವಕಾಶ ನೀಡಿದರೆ , ಮತ್ತೊಂದು ದಿನ ಕೇವಲ 1 ಗಂಟೆ ಮಾತ್ರ ನೀಡಿದ್ದಾರೆ ಎಂದು ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ದೂರಿದ್ದಾರೆ. ಅಲ್ಲದೆ ಆರೋಪಿಗಳಿಗೆ ಪ್ರತೀ ದಿನ ನಿಗದಿತ ಸಮಯಾವಕಾಶ ರೂಪಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

     ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್‌ಗೆ 2 ಗಂಟೆ, ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್‌ಗೆ 1 ಗಂಟೆ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾಗೆ ಕೇವಲ 30 ನಿಮಿಷ ಮಾತ್ರ ಸಮಯಾವಕಾಶ ಒದಗಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ತಮಗೆ ಆರೋಪಪಟ್ಟಿ ಓದಲು ಅವಕಾಶವೇ ನೀಡಿಲ್ಲ ಎಂದು ಇತರ ಆರೋಪಿಗಳಾದ ಖಾಲಿದ್ ಸೈಫಿ, ಶಿಫಾಉರ್ರಹ್ಮಾನ್ ರೆಹ್ಮಾನ್ ಮತ್ತು ಶದಾಬ್ ಅಹ್ಮದ್ ಹೇಳಿದರೆ, ಕಂಪ್ಯೂಟರ್‌ನ ಮುಂದೆ ಯಾರಾದರೊಬ್ಬರು ಇರುತ್ತಾರೆ. ತನಗೆ ಆರೋಪಪಟ್ಟಿ ಓದಲು ಆಗುತ್ತಿಲ್ಲ. ಆದ್ದರಿಂದ ಪೆನ್‌ಡ್ರೈವ್‌ನಲ್ಲಿ ಹಾಕಿಕೊಡಬೇಕು ಎಂದು ಮತ್ತೊಬ್ಬ ಆರೋಪಿ, ಆಮ್‌ಆದ್ಮಿ ಪಕ್ಷದ ಉಚ್ಛಾಟಿತ ಮುಖಂಡ ತಾಹಿರ್ ಹುಸೈನ್ ಮನವಿ ಸಲ್ಲಿಸಿದರು.

  ಅರೋಪಿಗಳಿಗೆ ಆರೋಪಟ್ಟಿಯ ಇ-ಪ್ರತಿಯನ್ನು ಒದಗಿಸಲು ಜನವರಿ 5ರಂದು ನ್ಯಾಯಾಲಯ ಒಪ್ಪಿಗೆ ನೀಡಿತ್ತು. ಆರೋಪಿಗಳಿಗೆ ಪರಿಶೀಲಿಸಲು ಸಾಧ್ಯವಾಗದಿದ್ದರೆ ಅದನ್ನು ಕಂಪ್ಯೂಟರ್‌ನಲ್ಲಿ ಅಪ್‌ಲೋಡ್ ಮಾಡುವ ಅಗತ್ಯವೇನಿದೆ ? ಆರೋಪಿಗಳಿಗೆ ವಿಭಿನ್ನ ಸಮಯಾವಕಾಶ ನೀಡಿದ್ದು ಯಾಕೆ ? ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್ ಪ್ರಶ್ನಿಸಿದ್ದಾರೆ. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಫೆ.2ಕ್ಕೆ ನಿಗದಿಗೊಳಿಸಿದೆ.

 ಈ ಮಧ್ಯೆ, ಖಾಲಿದ್, ಇಮಾಮ್ ಮತ್ತು ಹುಸೈನ್‌ರ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ಫೆಬ್ರವರಿ 2ರವರೆಗೆ ವಿಸ್ತರಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News