ಹಲವು ರಾಜ್ಯಗಳಲ್ಲಿ ವ್ಯರ್ಥವಾಗುತ್ತಿದೆ ಕೋವಿಡ್ ಲಸಿಕೆ : ವರದಿ

Update: 2021-01-21 03:38 GMT

ಹೊಸದಿಲ್ಲಿ: ಅಸ್ಸಾಂನಲ್ಲಿ 1000 ಡೋಸ್ ಕೋವಿಡ್-19 ಲಸಿಕೆ ಹೆಪ್ಪುಗಟ್ಟಿ ವ್ಯರ್ಥವಾದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಜನ ಲಸಿಕೆ ಪಡೆಯಲು ಹಿಂಜರಿಯುತ್ತಿರುವ ಕಾರಣದಿಂದ ಮತ್ತಷ್ಟು ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ವ್ಯರ್ಥವಾಗುತ್ತಿರುವ ಬಗ್ಗೆ ವರದಿಯಾಗಿದೆ.

ಲಸಿಕೆ ಪಡೆಯಲು ಜನ ಮುಂದಾಗದಿರುವ ಕಾರಣದಿಂದಾಗಿ ಲಸಿಕೆ ಡೋಸ್‌ಗಳು ವ್ಯರ್ಥವಾಗುತ್ತಿವೆ ಎಂದು ಆರು ರಾಜ್ಯಗಳ ಅಧಿಕಾರಿಗಳು ಬುಧವಾರ ಹೇಳಿಕೆ ನೀಡಿದ್ದಾರೆ.

ಮೊದಲ ದಿನವೇ ವಿಶ್ವದ ಯಾವುದೇ ಇತರ ದೇಶಗಳಿಗಿಂತ ಅಧಿಕ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ನೀಡಿಕೆ ಮೂಲಕ ಗಮನ ಸೆಳೆದಿದ್ದ ಭಾರತದಲ್ಲಿ, ಈ ಲಸಿಕೆ ಪಡೆಯಲು ಹಿಂಜರಿಕೆಯಿಂದಾಗಿ ಲಕ್ಷಾಂತರ ಸಂಖ್ಯೆಯಲ್ಲಿ ದಾಸ್ತಾನು ಆಗಿರುವ ಲಸಿಕೆಯ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಜನವರಿ 16ರಿಂದ ಲಸಿಕಾ ಕಾರ್ಯಕ್ರಮ ಆರಂಭವಾದ ಬಳಿಕ ಬುಧವಾರ ಸಂಜೆಯವರೆಗೆ 14,119 ಸೆಷನ್‌ಗಳಲ್ಲಿ 7,86,842 ಮಂದಿ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಹೇಳುತ್ತವೆ.

ಅಂದರೆ ಇದು ಉದ್ದೇಶಿತ ದೈನಿಕ ಸರಾಸರಿಯ ಶೇಕಡ 55ರಷ್ಟು ಮಾತ್ರ. ಲಸಿಕೆ ಪಡೆಯಲು ಆಯ್ಕೆ ಮಾಡಲಾದ 100 ಮಂದಿಯ ಪೈಕಿ 45 ಮಂದಿ ಲಸಿಕೆ ಪಡೆಯಲು ಹಾಜರಾಗುತ್ತಿಲ್ಲ. ಆಯ್ಕೆ ಮಾಡಿದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಗುರಿಯನ್ನು ತಲುಪಲು ಸಾಧ್ಯವಾಗದಿದ್ದಲ್ಲಿ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಲಭ್ಯವಾಗುವಂತೆ ಮಾಡುವುದು ಸೂಕ್ತ ಎಂದು ತಜ್ಞರು ಸಲಹೆ ಮಾಡಿದ್ದಾರೆ.

ಲಸಿಕೆ ಪಡೆಯಲು ಹಿಂಜರಿಕೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಡಿಜಿಟಲ್ ಪ್ಲಾಟ್‌ಫಾರಂ ಮೂಲಕ, ಲಸಿಕೆ ಪಡೆಯಲು ಆಯ್ಕೆಯಾಗದ ಕಾರ್ಯಕರ್ತರು ಕೂಡಾ ಲಸಿಕೆ ಪಡೆಯಲು ಬಯಸಿದಲ್ಲಿ ಲಸಿಕೆ ಡೋಸ್ ಪಡೆಯಬಹುದು ಎಂದು ಹೇಳಿದೆ. ಜತೆಗೆ ಇವರಿಗೆ ತಾತ್ಕಾಲಿಕ ಮೊದಲ ಡೋಸ್ ಪ್ರಮಾಣಪತ್ರಗಳನ್ನು ವಿತರಿಸಲು ಕ್ರಮ ಕೈಗೊಂಡಿದೆ. ಇಷ್ಟಾಗಿಯೂ ಲಸಿಕೆ ಪಡೆಯುವವರ ಪ್ರಮಾಣ ನಿಗದಿತ ಗುರಿಯ ಶೇಕಡ 65ನ್ನು ಮೀರಿಲ್ಲ.

ಲಸಿಕೆಯ ಬಾಟಲಿಯನ್ನು ತೆರೆದು ನಾಲ್ಕು ಗಂಟೆಗಳ ಒಳಗಾಗಿ ಸಂಪೂರ್ಣ ಬಳಸಬೇಕಾಗಿರುವುದರಿಂದ ಹಾಗೂ ಪ್ರತಿ ಬಾಟಲಿಯಲ್ಲಿ 10 ಡೋಸ್ ಕೋವಿಶೀಲ್ಡ್ ಅಥವಾ 20 ಡೋಸ್ ಕೊವ್ಯಾಕ್ಸಿನ್ ಇದ್ದು ಸಾಕಷ್ಟು ಸಂಖ್ಯೆಯಲ್ಲಿ ಲಸಿಕೆ ಪಡೆಯಲು ಕಾರ್ಯಕರ್ತರು ಮುಂದಾಗದ ಕಾರಣ ವ್ಯರ್ಥವಾಗುತ್ತಿದೆ ಎಂದು ಮಹಾರಾಷ್ಟ್ರ, ತಮಿಳುನಾಡು, ಹರ್ಯಾಣ, ಬಿಹಾರ ಮತ್ತು ಅಸ್ಸಾಂನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News