ಗೋವಿಜ್ಞಾನ ಪರೀಕ್ಷೆಯ ತನ್ನ ಪಠ್ಯದಿಂದ ವಿವಾದಾತ್ಮಕ ಅಧ್ಯಾಯಗಳನ್ನು ಕೈಬಿಟ್ಟ ರಾ.ಕಾಮಧೇನು ಆಯೋಗ

Update: 2021-01-21 16:51 GMT

ಹೊಸದಿಲ್ಲಿ,ಜ.21: ಮೋದಿ ಸರಕಾರದ ರಾಷ್ಟ್ರೀಯ ಕಾಮಧೇನು ಆಯೋಗವು ಫೆ.25ರಂದು ತಾನು ನಡೆಸಲಿರುವ ಗೋ ವಿಜ್ಞಾನ ಪರೀಕ್ಷೆಗಾಗಿ ಸಿದ್ಧಪಡಿಸಿರುವ ಆಕರ ವಿಷಯಗಳಿಂದ 10 ಅಧ್ಯಾಯಗಳನ್ನು ಕೈಬಿಟ್ಟಿದೆ. ಈ ಅಧ್ಯಾಯಗಳಲ್ಲಿನ ಹೇಳಿಕೆಗಳು ಅವೈಜ್ಞಾನಿಕವಾಗಿವೆ ಎಂದು ಹಲವರು ಟೀಕಿಸಿದ್ದರು.

54 ಪುಟಗಳ ವಿವಾದಾತ್ಮಕ ಪಠ್ಯವು ಗೋಹತ್ಯೆ ಮತ್ತು ಭೂಕಂಪಗಳಿಗೆ ನಂಟು ಕಲ್ಪಿಸಿತ್ತು ಮತ್ತು ಜರ್ಸಿ ಹಸುಗಳು ಸೋಮಾರಿಗಳಾಗಿವೆ ಹಾಗೂ ಸುಲಭವಾಗಿ ರೋಗಗಳಿಗೆ ತುತ್ತಾಗುತ್ತವೆ ಎಂದು ಬಣ್ಣಿಸಿತ್ತು.

ಜ.6ರಂದು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಪಠ್ಯದಲ್ಲಿ ಆಯೋಗವು ಆಕಳ ಹಾಲು ಮತ್ತು ಮೂತ್ರ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ ಎಂದೂ ಹೇಳಿಕೊಂಡಿತ್ತು.

ಎರಡು ದಿನಗಳ ಬಳಿಕ ಈ ವಿಷಯವನ್ನು ಪಠ್ಯದಿಂದ ತೆಗೆದುಹಾಕಲಾಗಿತ್ತು.

ಹೊಸ ಆವೃತ್ತಿಯನ್ನು ಸೋಮವಾರ ಅಪ್‌ಲೋಡ್ ಮಾಡಲಾಗಿದ್ದು,ಮೂಲ ಆವೃತ್ತಿಯ ಕೇವಲ ಮೂರನೇ ಒಂದು ಭಾಗದಷ್ಟಿದೆ ಮತ್ತು ಎರಡು ಅಧ್ಯಾಯಗಳನ್ನು ಮಾತ್ರ ಒಳಗೊಂಡಿದೆ.

ಈ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯೋಗದ ಮಾಧ್ಯಮ ಪ್ರತಿನಿಧಿಯೋರ್ವರು,ಕೆಲವು ತಾಂತ್ರಿಕ ದೋಷಗಳಿಂದಾಗಿ ವಿಷಯಗಳನ್ನು ತೆಗೆಯಲಾಗಿದ್ದು,ಹೆಚ್ಚು ಲೇಖಕರು ಮತ್ತು ಪ್ರಕಾಶಕರ ಲಿಂಕ್‌ಗಳೊಂದಿಗೆ ಒಂದೊಂದಾಗಿ ಅವುಗಳನ್ನು ಅಪ್‌ಲೋಡ್ ಮಾಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಪಶು ಸಂಗೋಪನೆ ಇಲಾಖೆಯಡಿ 2019ರಲ್ಲಿ ಸ್ಥಾಪನೆಗೊಂಡಿರುವ ಆಯೋಗಕ್ಕೆ ಗೋತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿದೆ.

ಆಯೋಗವು ತನ್ನ ಉಪಕ್ರಮಗಳ ಬಗ್ಗೆ ತಮ್ಮೊಂದಿಗೆ ಚರ್ಚಿಸಿರಲಿಲ್ಲ. ಈ ವಿದ್ಯಮಾನವು ತಮ್ಮನ್ನು ಅವಮಾನಕ್ಕೆ ಗುರಿಯಾಗಿಸಿದೆ ಎಂದು ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳಿಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News