ಮಮತಾ ಬ್ಯಾನರ್ಜಿ ಆಪ್ತ, ಖ್ಯಾತ ಬಂಗಾಲಿ ನಟ ಬಿಜೆಪಿ ಸೇರ್ಪಡೆ?

Update: 2021-01-22 04:46 GMT
ರುದ್ರನಿಲ್ ಘೋಷ್ ಮತ್ತು ಮಮತಾ ಬ್ಯಾನರ್ಜಿ

ಕೊಲ್ಕತ್ತಾ, ಜ.22: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ತೀರಾ ಇತ್ತೀಚಿನವರೆಗೂ ಆಪ್ತರಾಗಿದ್ದ ಖ್ಯಾತ ಬಂಗಾಲಿ ನಟ ರುದ್ರನಿಲ್ ಘೋಷ್ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಮುಂಬರುವ ದಿನಗಳಲ್ಲಿ ವಿಸ್ತತ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡಲು ಸಜ್ಜಾಗುತ್ತಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ.

ಈ ನಡುವೆ ಘೋಷ್ ದಕ್ಷಿಣ ಕೊಲ್ಕತ್ತಾದಲ್ಲಿ ಬುಧವಾರ ರಾತ್ರಿ ಸಮಾರಂಭವೊಂದರಲ್ಲಿ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಮತ್ತು ನಟಿ, ಬಿಜೆಪಿ ನಾಯಕಿ ರಿಮ್ಜಿಮ್ ಮಿತ್ರಾ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜನತೆಗಾಗಿ ಕೆಲಸ ಮಾಡುವಂತೆ ಅಧಿಕಾರಿ ತಮಗೆ ಸಲಹೆ ಮಾಡಿದ್ದಾಗಿ ಘೋಷ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಹೌದು; ನಾನು ಸಕ್ರಿಯವಾಗಲು ಬಯಸಿದ್ದೇನೆ. ಜನತೆಗಾಗಿ ನಾನು ಕೆಲಸ ಮಾಡಲು ಬಯಸಿದ್ದೇನೆ. ವಿಸ್ತೃತ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುವ ಬಯಕೆ ವ್ಯಕ್ತಪಡಿಸಿದ್ದೇನೆ. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನಾನು ಸುವೇಂದು ಅಧಿಕಾರಿಯ ಅಭಿಮಾನಿ. ನಾನು ಇಷ್ಟಪಡುವ ವ್ಯಕ್ತಿ ಅವರು" ಎಂದು ಘೋಷ್ ಸ್ಪಷ್ಟಪಡಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ತಮ್ಮ ಹುಟ್ಟುಹಬ್ಬದಂದು ಘೋಷ್ ಬಿಜೆಪಿ ಯುವ ಮೋರ್ಚಾ ಮುಖಂಡ ಹಾಗೂ ದೀರ್ಘಕಾಲದ ಗೆಳೆಯ ಶಂಕುದೇಬ್ ಪಾಂಡಾ ಅವರನ್ನು ಭೇಟಿ ಮಾಡಿದ್ದರು. ಬಿಜೆಪಿ ಸೇರುವಂತೆ ಪಾಂಡಾ ಆಹ್ವಾನಿಸಿದ್ದು, ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಜತೆ ಮಾತುಕತೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಘೋಷ್ ಹೇಳಿದ್ದಾರೆ. ಆದರೆ ಈ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದಿದ್ದಾರೆ.

ರಾಜ್ಯದ ಗ್ರಾಹಕ ವ್ಯವಹಾರಗಳ ಇಲಾಖೆಯ ಜತೆ ಇತ್ತೀಚಿನವರೆಗೂ ನಿಕಟ ನಂಟು ಹೊಂದಿದ್ದ ಅವರು, ಸಾರ್ವಜನಿಕ ಸೇವೆಯ ಹಕ್ಕು ಆಯುಕ್ತರಾಗಿ ಜನಪರ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ಟಿವಿ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News