ಕೃಷಿ ಕಾಯ್ದೆಗಳ ಕುರಿತು ಸುಪ್ರೀಂ ಸಮಿತಿಯ ಮೊದಲ ಸಭೆಯಿಂದ ದೂರವುಳಿದ ಪ್ರತಿಭಟನಾನಿರತ ರೈತ ಸಂಘಟನೆಗಳು

Update: 2021-01-22 14:36 GMT

ಹೊಸದಿಲ್ಲಿ,ಜ.22: ನೂತನ ಕೃಷಿ ಕಾಯ್ದೆಗಳ ಕುರಿತು ಸರ್ವೋಚ್ಚ ನ್ಯಾಯಾಲಯವು ನೇಮಿಸಿರುವ ಸಮಿತಿಯು ಗುರುವಾರ ತನ್ನ ಮೊದಲ ಸಭೆಯನ್ನು ನಡೆಸಿದ್ದು,ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)ದಡಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿರುವ ರೈತ ಸಂಘಟನೆಗಳು ಈ ಸಭೆಯಿಂದ ದೂರವೇ ಉಳಿದಿದ್ದವು. ಸಮಿತಿಯು ಹತ್ತು ರೈತರ ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಿದ್ದು,ಈ ಪೈಕಿ ಒಂದೂ ಸಂಘಟನೆಯು ಎಸ್‌ಕೆಎಂ ಭಾಗವಾಗಿಲ್ಲ.

ಸಭೆಯ ಬಳಿಕ ಮಾಧ್ಯಮ ಹೇಳಿಕೆಯನ್ನು ಬಿಡುಗಡೆಗೊಳಿಸಿದ ಸಮಿತಿಯು,ಉಪಸ್ಥಿತರಿದ್ದ ರೈತರ ಒಕ್ಕೂಟಗಳು ಕೃಷಿ ಕಾನೂನುಗಳ ತಮ್ಮ ಮುಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಕಾನೂನುಗಳಲ್ಲಿ ಸುಧಾರಣೆಗಳನ್ನು ತರುವ ಬಗ್ಗೆ ನಾವು ಸಲಹೆಗಳ ಬಗ್ಗೆ ಸ್ವೀಕರಿಸಿದ್ದೇವೆ ಎಂದು ತಿಳಿಸಿದೆ.

ಸರ್ವೋಚ್ಚ ನ್ಯಾಯಾಲಯವು ಜ.12ರಂದು ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದ್ದು,ಜ.14ರಂದು ನಿಗದಿಯಾಗಿದ್ದ ಮೊದಲ ವರ್ಚುವಲ್ ಸಭೆಯ ಕೆಲವೇ ಗಂಟೆಗಳ ಮುನ್ನ ಭೂಪಿಂದರ್ ಸಿಂಗ್ ಮಾನ್ ಅವರು ತಾನು ಸದಸ್ಯತ್ವವನ್ನು ತೊರೆಯುವುದಾಗಿ ಪ್ರಕಟಿಸಿದ್ದರು. ಸಮಿತಿಯು ಕೇವಲ ಮೂವರು ಸದಸ್ಯರೊಂದಿಗೆ ಕಾರ್ಯವನ್ನು ಮುಂದುವರಿಸಿದೆ.

ಕರ್ನಾಟಕ,ಕೇರಳ,ಮಧ್ಯಪ್ರದೇಶ,ಮಹಾರಾಷ್ಟ್ರ,ಒಡಿಶಾ,ತೆಲಂಗಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳ ರೈತ ಸಂಘಟನೆಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಈ ಮೊದಲ ಸಭೆಯಲ್ಲಿ ಪಂಜಾಬ ಅಥವಾ ಹರ್ಯಾಣದ ಯಾವುದೇ ರೈತರು ಪಾಲ್ಗೊಂಡಿರಲಿಲ್ಲ.

ಕೃಷಿ ಕಾನೂನುಗಳ ವಿರುದ್ಧ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ 40ಕ್ಕೂ ಅಧಿಕ ರೈತ ಸಂಘಟನೆಗಳು ಸಮಿತಿಯ ಮುಂದೆ ಉಪಸ್ಥಿತಿಗೆ ನಿರಾಕರಿಸಿವೆ. ಸಮಿತಿಯ ಸದಸ್ಯರು ಪೂರ್ವಾಗ್ರಹ ಪೀಡಿತರಾಗಿದ್ದಾರೆ ಮತ್ತು ಕೃಷಿ ಕಾಯ್ದೆಗಳ ಪರ ಒಲವು ಹೊಂದಿದ್ದಾರೆ ಎಂದು ಅವು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News