ಕೃಷಿ ಕಾಯ್ದೆ ತಡೆಹಿಡಿಯುವ ಪ್ರಸ್ತಾವ ಒಪ್ಪದಿದ್ದಲ್ಲಿ ಮುಂದಿನ ಮಾತುಕತೆ ಇಲ್ಲ: ಕೇಂದ್ರದ ಬಿಗಿಪಟ್ಟು,ರೈತರ ತಿರಸ್ಕಾರ

Update: 2021-01-22 16:04 GMT

ಹೊಸದಿಲ್ಲಿ,ಜ.22: ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾ ನಿರತ ರೈತರ ಜೊತೆ ಕೇಂದ್ರ ಸರಕಾರ ಶುಕ್ರವಾರ ನಡೆಸಿದ 11ನೇ ಸುತ್ತಿನ ಮಾತುಕತೆಯೂ ವಿಫಲ ಗೊಂಡಿದೆ. ಕೃಷಿ ಸುಧಾರಣಾ ಕಾಯ್ದೆಗಳ ಜಾರಿಯನ್ನು ಒಂದೂವರೆ ವರ್ಷಗಳವರೆಗೆ ತಡೆಹಿಡಿಯುವ ತನ್ನ ಪ್ರಸ್ತಾವವನ್ನು ರೈತ ಸಂಘಟನೆಗಳು ಒಪ್ಪದೆ ಇದ್ದಲ್ಲಿ ತಾನು ಮಾತು ಕತೆಯಿಂದ ಹೊರನಡೆಯುವುದಾಗಿ ಕೇಂದ್ರ ಸರಕಾರ ಸ್ಪಷ್ಟವಾದ ಸೂಚನೆಯನ್ನು ನೀಡಿದೆ.

ಕೃಷಿ ಕಾಯ್ದೆಗಳನ್ನು 18 ತಿಂಗಳುಗಳ ಕಾಲ ತಡೆಹಿಡಿಯುವ ತನ್ನ ಪ್ರಸ್ತಾವವು , ‘‘ ಅತ್ಯುತ್ತಮ ಹಾಗೂ ಕೊನೆಯ ಕೊಡುಗೆಯಾಗಿದೆ’’ ಎಂದು ಕೇಂದ್ರ ಸರಕಾರ ತಿಳಿಸಿದೆ. ತನ್ನ ಈ ಪ್ರಸ್ತಾವವನ್ನು ಮರುಪರಿಶೀಲಿಸುವಂತೆಯೂ ಅದು ರೈತರನ್ನು ಕೇಳಿಕೊಂಡಿದೆ.

ಆದರೆ ಕೇಂದ್ರ ಸರಕಾರದ ಕೊಡುಗೆಯನ್ನು ತಿರಸ್ಕರಿಸಿರುವ ರೈತರು ತಮ್ಮ ಪ್ರತಿಭಟನೆಯನ್ನು ದೇಶಾದ್ಯಂತ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಂದು ರೈತ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ಸರಕಾರದ ಪ್ರಸ್ತಾವದ ಕುರಿತು ಮಾತುಕತೆಗೆ ಸಿದ್ಧವಿದ್ದಲ್ಲಿ ಮಾತ್ರವೇ ಮುಂದಿನ ಸುತ್ತಿನ ಮಾತುಕತೆಗಳು ನಡೆಯುವುದಾಗಿ ಸ್ಪಷ್ಟಪಡಿಸಿದರು. ‘‘ ನಿಮ್ಮ ಕಳವಳಗಳಿಗೆ ಸ್ಪಂದಿಸುವ ಉದ್ದೇಶದಿಂದ ಕೃಷಿ ಕಾಯ್ದೆಯನ್ನು 18 ತಿಂಗಳುಗಳ ಕಾಲ ತಡೆಹಿಡಿಯುವ ಪ್ರಸ್ತಾವವನ್ನು ಮುಂದಿಟ್ಟಿದ್ದೆವು. ಆ ಪ್ರಸ್ತಾವದಲ್ಲಿ ಯಾವುದೇ ತಪ್ಪು ಇರಲಿಲ್ಲ. ನಿಮಗೆ ನಾವು ಅತ್ಯುತ್ತಮವಾದ ಪ್ರಸ್ತಾವವನ್ನು ನೀಡಿದ್ದೆವು. ದುರದೃಷ್ಟವಶಾತ್ ನೀವು ಅದನ್ನು ತಿರಸ್ಕರಿಸಿದ್ದೀರಿ’’ ಎಂದು ಅವರು ರೈತ ಮುಖಂಡರನ್ನುದ್ದೇಶಿಸಿ ಹೇಳಿದರು.

ಇಂದು ಕೇಂದ್ರ ಹಾಗೂ ರೈತ ಸಂಘಟನೆಗಳ ನಡುವೆ ಕೇವಲ 18 ನಿಮಿಷಗಳ ಕಾಲ ಮಾತ್ರವೇ ಮಾತುಕತೆ ನಡೆಯಿತು. ಉಳಿದ ಸಮಯವಿಡೀ ರೈತ ನಾಯಕರು ಪ್ರತ್ಯೇಕ ಕೊಠಡಿಯೊಂದರಲ್ಲಿ ಸಮಾಲೋಚನೆ ನಡೆಸಿದರು. ಕೇಂದ್ರ ಸರಕಾರದ ಪ್ರಸ್ತಾವದ ಬಗ್ಗೆ ಚರ್ಚಿಸಲು ಬಯಸಿದಲ್ಲಿ ಮಾತ್ರವೇ ಮುಂದಿನ ಸುತ್ತಿನ ಮಾತುಕತೆಗಳು ನಡೆಯಲಿದೆಯೆಂದು ತೋಮರ್ ರೈತ ಪ್ರತಿನಿಧಿಗಳಿಗೆ  ಸ್ಪಷ್ಟವಾಗಿ ತಿಳಿಸಿದರೆಂದು ಮೂಲಗಳು ಹೇಳಿವೆ.

ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಮೂರು ಕೃಷಿ ಕಾಯ್ದೆಗಳ ಜಾರಿಯನ್ನು ಒಂದೂವರೆ ವರ್ಷದವರೆಗೆ ತಡೆಹಿಡಿಯುವ ಕೇಂದ್ರ ಸರಕಾರದ ಪ್ರಸ್ತಾವವನ್ನು ತಿರಸ್ಕರಿಸಿದ್ದರು ಮತ್ತು ಮೂರು ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು.

ಕೇಂದ್ರ ಸರಕಾರವು ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಒಪ್ಪದಿರುವ ಹಿನ್ನೆಲೆಯಲ್ಲಿ ಜನವರಿ 26ರಂದು ತಮ್ಮ ಯೋಜಿತ ಟ್ರ್ಯಾಕ್ಟರ್ ರ್ಯಾಲಿಯನ್ನು ನಡೆಸುವುದಾಗಿ ಪ್ರತಿಭಟನಾ ನಿರತ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News