ಮೇಘಾಲಯ: ಹೊಂಡಕ್ಕೆ ಬಿದ್ದು 6 ವಲಸೆ ಕಾರ್ಮಿಕರ ಸಾವು

Update: 2021-01-22 17:56 GMT

ಶಿಲ್ಲಾಂಗ್, ಜ.22: ಮೇಘಾಲಯದ ಈಸ್ಟ್ ಜೈಂಟಿಯಾ ಹಿಲ್ಸ್ ಜಿಲ್ಲೆಯ ಅರಣ್ಯದಲ್ಲಿ 6 ವಲಸೆ ಕಾರ್ಮಿಕರು 150 ಅಡಿ ಆಳದ ಹೊಂಡಕ್ಕೆ ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತಪಟ್ಟವರು ಅಸ್ಸಾಂ ನಿವಾಸಿಗಳಾಗಿದ್ದಾರೆ. ಇವರು ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿದ್ದಾಗ ಹೊಂಡಕ್ಕೆ ಬಿದ್ದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆದರೆ ಇದನ್ನು ಸರಕಾರದ ಮೂಲಗಳು ನಿರಾಕರಿಸಿದ್ದು , ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಗೆ ನಡೆಯುತ್ತಿಲ್ಲ. ಮೃತಪಟ್ಟವರು ಇಲ್ಲಿ ಮಣ್ಣು ಅಗೆಯುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಹೊಂಡಕ್ಕೆ ಬಿದ್ದಿದ್ದಾರೆ ಎಂದು ಹೇಳಿವೆ. 2018ರಲ್ಲಿ ಇದೇ ಪ್ರದೇಶದಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದ್ದಾಗ ಮಣ್ಣಿನ ದಿಬ್ಬ ಕುಸಿದು 15 ಮಂದಿ ನಾಪತ್ತೆಯಾಗಿದ್ದರು. ಮೇಘಾಲಯದಲ್ಲಿ ಸುಮಾರು 5,000 ಕಲ್ಲಿದ್ದಲು ಗಣಿಗಳು ಅಕ್ರಮವಾಗಿ ಕಾರ್ಯಾಚರಿಸುತ್ತಿವೆ ಎಂದು ವರದಿಯಾಗಿದೆ. ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಗಾರಿಕೆಯನ್ನು 2014ರಲ್ಲಿ ರಾಷ್ಟ್ರೀಯ ಹಸಿರು ಪ್ರಾಧಿಕಾರ ನಿಷೇಧಿಸಿದೆ. ಆದರೂ ಇಲ್ಲಿ ಅಕ್ರಮ ಗಣಿಗಾರಿಕೆ ಮುಂದುವರಿದಿದ್ದು ಹೆದ್ದಾರಿಯಲ್ಲಿ ಕಲ್ಲಿದ್ದಲು ತುಂಡುಗಳನ್ನು ಹೇರಿಕೊಂಡ ಲಾರಿಗಳ ಸಂಚಾರ ಸಾಮಾನ್ಯ ದೃಶ್ಯವಾಗಿದೆ. 2014ರಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಿಷೇಧಿಸಿದ ಬಳಿಕ ಮೇಘಾಲಯದಲ್ಲಿ ಆರ್ಥಿಕ ಚಟುವಟಿಕೆಗಳು 70ಶೇ. ದಷ್ಟು ಕಡಿಮೆಯಾಗಿದೆ ಎಂದು ಸರಕಾರದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News