ಕೃತಕ ಬುದ್ಧಿಮತ್ತೆಯ ಕ್ಯಾಮರಾ ಬಳಸಿ ಮಹಿಳೆಯರ ಸುರಕ್ಷತೆಗೆ ಲಕ್ನೊ ಪೊಲೀಸರ ಕ್ರಮ

Update: 2021-01-22 18:19 GMT

ಲಕ್ನೊ, ಜ.22: ಅಪಾಯದಲ್ಲಿ ಸಿಲುಕಿದಾಗ ಮಹಿಳೆಯರು ಮುಖದಲ್ಲಿ ವ್ಯಕ್ತಪಡಿಸುವ ಭಾವನೆಯನ್ನು ಗುರುತಿಸಿ, ಅವರ ಫೋಟೋ ತೆಗೆದು ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸುವ ಕೃತಕ ಬುದ್ಧಿಮತ್ತೆಯ ಕ್ಯಾಮರಾ ಬಳಸಿ ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಉತ್ತರಪ್ರದೇಶದ ಲಕ್ನೊ ಪೊಲೀಸರು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ರಸ್ತೆಯಲ್ಲಿ ಚುಡಾವಣೆ, ಕಿರುಕುಳ, ಬೆದರಿಕೆಗೆ ಒಳಗಾಗುವ ಅಥವಾ ಅಪರಿಚಿತ ವ್ಯಕ್ತಿಗಳು ಹಿಂಬಾಲಿಸಿಕೊಂಡು ಬರುವ ಸಂದರ್ಭ ಮಹಿಳೆಯರ ಮುಖಭಾವದಲ್ಲಿ ಆಗುವ ಬದಲಾವಣೆಯನ್ನು ಪತ್ತೆಹಚ್ಚಿ, ತಕ್ಷಣ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸುವ ಕ್ಯಾಮರಾ ಇದಾಗಿದೆ.

ಅಪಾಯಕ್ಕೆ ಸಿಲುಕಿದ ಮಹಿಳೆ ನಂಬರ್ 100 (ರಾಷ್ಟ್ರೀಯ ಪೊಲೀಸ್ ಹೆಲ್ಪ್‌ಲೈನ್) ಅಥವಾ ನಂಬರ್ 112(ಉತ್ತರಪ್ರದೇಶ ತುರ್ತು ಸೇವೆ)ಕ್ಕೆ ಕರೆ ಮಾಡುವ ಮುನ್ನವೇ ಪೊಲೀಸರು ಕಾರ್ಯಾಚರಣೆಗೆ ಸಿದ್ಧವಾಗಿರುತ್ತಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಉಪಕ್ರಮ ಜಾರಿಯಾಗಲಿದೆ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ)ನ ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಆದರೆ ಈ ಪ್ರಕ್ರಿಯೆ ಭಾರತದ ಪ್ರಜೆಗಳ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಮತ್ತು ಇದನ್ನು ದುರ್ಬಲ ವರ್ಗದವರ ಮೇಲೆ ನಿಗಾ ಇಡುವ ಸಾಧನವಾಗಿ ಬಳಸಲ್ಪಡುವ ಅಪಾಯವಿದೆ ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ವಕೀಲರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News