ಟೆಸ್ಟ್ ಕ್ರಿಕೆಟ್: ಜೇಮ್ಸ್ ಆ್ಯಂಡರ್ಸನ್ ಗೆ 30ನೇ ಬಾರಿ ಐದು ವಿಕೆಟ್ ಗೊಂಚಲು

Update: 2021-01-23 15:31 GMT

ಗಲ್ಲೆ(ಶ್ರೀಲಂಕಾ), ಜ.23: ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ನ ಎರಡನೇ ದಿನದಾಟವಾದ ಶನಿವಾರ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 30ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು.

92 ರನ್ ಗಳಿಸಿದ್ದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ನಿರೊಶನ್ ಡಿಕ್ವೆಲ್ಲಾ ರನ್ನು ಪೆವಿಲಿಯನ್ ಗೆ ಅಟ್ಟಿದ 38ರ ಹರೆಯದ ಆ್ಯಂಡರ್ಸನ್  ಲಂಕಾ ದಾಂಡಿಗನಿಗೆ ಶತಕವನ್ನು ನಿರಾಕರಿಸಿದರು. ಇನ್ನೊಂದು ವಿಕೆಟ್ ಕಬಳಿಸಿದ ಆ್ಯಂಡರ್ಸನ್ 2012ರಲ್ಲಿ ಗಲ್ಲೆಯಲ್ಲಿ ದಾಖಲಿಸಿದ್ದ ತನ್ನ ಪ್ರದರ್ಶನವನ್ನು(5-75)ಉತ್ತಮಪಡಿಸಿಕೊಂಡರು.

ಆ್ಯಂಡರ್ಸನ್ ಉಪ ಖಂಡದಲ್ಲಿ ಐದು ವಿಕೆಟ್ ಗುಚ್ಚ ಪಡೆದಿರುವ ಹಿರಿಯ ವೇಗದ ಬೌಲರ್ ಎನಿಸಿಕೊಂಡರು. 37ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದ ನ್ಯೂಝಿಲ್ಯಾಂಡ್ ದಿಗ್ಗಜ ರಿಚರ್ಡ್ ಹ್ಯಾಡ್ಲೀ ದಾಖಲೆಯನ್ನು ಆ್ಯಂಡರ್ಸನ್ ಮುರಿದರು.

30ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿರುವ ಆ್ಯಂಡರ್ಸನ್ ಆಸ್ಟ್ರೇಲಿಯದ ಮಾಜಿ ಖ್ಯಾತ ವೇಗದ ಬೌಲರ್ ಗ್ಲೆನ್ ಮೆಕ್ ಗ್ರಾತ್ ದಾಖಲೆಯನ್ನು ಮುರಿದರು. 2007ರಲ್ಲಿ ನಿವೃತ್ತಿಯಾಗಿರುವ ಮೆಕ್ ಗ್ರಾತ್ ಒಟ್ಟು 29 ಬಾರಿ 5 ವಿಕೆಟ್ ಗುಚ್ಚ ಪಡೆದ ಸಾಧನೆ ಮಾಡಿದ್ದರು.
 2ನೇ ಟೆಸ್ಟ್ ನಲ್ಲಿ ಸ್ಟುವರ್ಟ್ ಬ್ರಾಡ್ ಬದಲಿಗೆ ಆಡುವ 11ರ ಬಳಗಕ್ಕೆ ಸೇರಿದ್ದ ಆ್ಯಂಡರ್ಸನ್ ದಿನದ ಮೊದಲ ಓವರ್ ನಲ್ಲಿ ಆ್ಯಂಜೆಲೊ ಮ್ಯಾಥ್ಯೂಸ್ (110)ವಿಕೆಟನ್ನು ಉರುಳಿಸಿದರು.

40 ರನ್ ಗೆ ಆರು ವಿಕೆಟ್ ಗಳನ್ನು ಉರುಳಿಸಿರುವ ಆ್ಯಂಡರ್ಸನ್ ಶ್ರೀಲಂಕಾವನ್ನು ಮೊದಲ ಇನಿಂಗ್ಸ್ ನಲ್ಲಿ  381 ರನ್ ಗೆ ನಿಯಂತ್ರಿಸಲು ನೆರವಾದರು. ಒಟ್ಟು 606 ವಿಕೆಟ್ ಗಳನ್ನು ಉರುಳಿಸಿರುವ ಆ್ಯಂಡರ್ಸನ್ ಗರಿಷ್ಟ ವಿಕೆಟ್ ಪಡೆದಿರುವ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News