ಕೊರೋನ ವಿರುದ್ಧದ ಹೋರಾಟದಲ್ಲಿ ನಿರಂತರ ಬೆಂಬಲಕ್ಕಾಗಿ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಡಬ್ಲ್ಯುಎಚ್‌ಒ

Update: 2021-01-23 17:30 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 23: ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ನೀಡುತ್ತಿರುವ ‘ನಿರಂತರ ಬೆಂಬಲ’ಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದೆ.

ಭಾರತವು ದಕ್ಷಿಣ ಏಶ್ಯದ ತನ್ನ ನೆರೆಯ ದೇಶಗಳು ಹಾಗೂ ಬ್ರೆಝಿಲ್ ಮತ್ತು ಮೊರೊಕ್ಕೊದಂಥ ಇತರ ದೇಶಗಳಿಗೂ ಲಸಿಕೆಯನ್ನು ಕಳುಹಿಸುತ್ತಿದೆ. ದಕ್ಷಿಣ ಆಫ್ರಿಕ ಕೂಡ ಶೀಘ್ರದಲ್ಲೇ ಭಾರತದಿಂದ ಲಸಿಕೆಗಳನ್ನು ಪಡೆಯಲಿದೆ.

‘‘ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟದಲ್ಲಿ ನೀಡುತ್ತಿರುವ ನಿರಂತರ ಹೋರಾಟಕ್ಕಾಗಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞತೆಗಳು. ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ನಾವಿಂದು ಜೊತೆಯಾಗಿ ಕೆಲಸ ಮಾಡಿದರೆ ಮಾತ್ರ ಈ ವೈರಸನ್ನು ತಡೆಯಬಹುದು ಹಾಗೂ ಪ್ರಾಣಗಳು ಮತ್ತು ಜೀವನೋಪಾಯಗಳನ್ನು ಉಳಿಸಬಹುದು’’ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಟ್ವೀಟ್ ಮಾಡಿದ್ದಾರೆ.

ಹಲವು ದೇಶಗಳಿಗೆ ಲಸಿಕೆ ಪೂರೈಕೆ

ಭಾರತ ಶುಕ್ರವಾರ ಬ್ರೆಝಿಲ್‌ಗೆ 20 ಲಕ್ಷ ಡೋಸ್ ಕೊರೋನ ಲಸಿಕೆಯನ್ನು ಕಳುಹಿಸಿದೆ. ಬಾಂಗ್ಲಾದೇಶ, ನೇಪಾಳ, ಭೂತಾನ್ ಮತ್ತು ಮಾಲ್ದೀವ್ಸ್‌ಗೆ ಅದು ಈಗಾಗಲೇ 32 ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ಕಳುಹಿಸಿದೆ. ಶೀಘ್ರದಲ್ಲೇ ಮಾರಿಶಸ್, ಮ್ಯಾನ್ಮಾರ್ ಮತ್ತು ಸಿಶೆಲಿಸ್ ದೇಶಗಳಿಗೂ ಲಸಿಕೆಯನ್ನು ಕಳುಹಿಸಲಾಗುವುದು. ಪಟ್ಟಿಯಲ್ಲಿರುವ ಮುಂದಿನ ಹೆಸರುಗಳು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News