"ಭಯಭೀತನಾಗಿ ಹೇಳಿಕೆ ನೀಡಿದ್ದಾನೆ": ರೈತರ ಪ್ರತಿಭಟನೆ ನಡುವೆ ನುಸುಳಿದ್ದ 'ಹಂತಕ'ನ ಕುರಿತು ಪೊಲೀಸ್ ಹೇಳಿಕೆ

Update: 2021-01-24 07:23 GMT

ಹೊಸದಿಲ್ಲಿ,ಜ.24: ಕೇಂದ್ರ ಸರಕಾರ ಜಾರಿಗೆ ತಂದಿದ್ದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಶನಿವಾರದಂದು ಓರ್ವ ಆಗಂತುಕ ವ್ಯಕ್ತಿಯನ್ನು ರೈತರು ಪತ್ತೆ ಹಚ್ಚಿದ್ದು, ಆತ ನಾಲ್ವರು ರೈತ ಮುಖಂಡರ ಕೊಲೆಗೆ ಸಂಚು ಹೂಡಿದ್ದ ಎಂದು ಆರೋಪಿಸಲಾಗಿತ್ತು. ಆದರೆ ಇದೀಗ ಪೊಲೀಸರು ಈ ಕುರಿತು "ಆತ ಭಯಭೀತನಾಗಿ ಆ ರೀತಿಯ ಹೇಳಿಕೆ ನೀಡಿದ್ದ" ಎಂದು ಹೇಳಿದ್ದಾರೆ.

"ರಾಯ್ ಪೊಲೀಸ್ ಠಾಣೆಯಲ್ಲಿರುವ ಪ್ರದೀಪ್ ಎಂಬ ಪೊಲೀಸ್ ಇನ್ ಸ್ಪೆಕ್ಟರ್ ನನಗೆ ಈ ಕೆಲಸವನ್ನು ವಹಿಸಿದ್ದರು ಎಂದು ಆತ ಹೇಳಿಕೆ ನೀಡಿದ್ದ. ಆದರೆ ಅಲ್ಲಿ ಪ್ರದೀಪ್ ಎಂಬ ಹೆಸರಿನ ಯಾವುದೇ ಪೊಲೀಸ್ ಅಧಿಕಾರಿಯಿಲ್ಲ" ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಜಶನ್ ದೀಪ್ ಸಿಂಗ್ ರಾಂಧವ ಹೇಳಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ.

"ಆ ವ್ಯಕ್ತಿಯು ಸೋನಿಪತ್‌ ನಿವಾಸಿಯಾಗಿದ್ದಾನೆ. ಆತನ ತಂದೆ ಅಡುಗೆ ಕೆಲಸ ಮಾಡುತ್ತಿದ್ದು, ತಾಯಿಯು ಪಾತ್ರೆಗಳನ್ನು ತೊಳೆಯುವ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಮುಸುಕುಧಾರಿ ವ್ಯಕ್ತಿಯು ಫ್ಯಾಕ್ಟರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಪ್ರತಿಭಟನೆಯ ಸ್ಥಳದಲ್ಲಿದ್ದ ಈತನನ್ನು ಕ್ಯಾಂಪ್‌ ಗೆ ಕರೆದೊಯ್ದು ಥಳಿಸಲಾಗಿತ್ತು. ನಾನು ಭಯದಿಂದಾಗಿ ಈ ಹೇಳಿಕೆಗಳನ್ನು ನೀಡಿದ್ದೇನೆ ಎಂದು ಆತ ನಮಗೆ ತಿಳಿಸಿದ್ದಾನೆ. ಆತನ ವಿರುದ್ಧ ಯಾವುದೇ ಕ್ರಮಿನಲ್‌ ದಾಖಲೆಗಳು ಇಲ್ಲ" ಎಂದು ಪೊಲೀಸ್‌ ಅಧಿಕಾರಿ ಹೇಳಿಕೆ ನೀಡಿದ್ದಾರೆ.

"ಲ್ಯಾಂಡ್‌ ಲೈನ್‌ ನಂಬರ್‌ ಗಳಿಂದ ತನಗೆ ಕರೆ ಬರುತ್ತಿರುವುದಾಗಿ ಆತ ತಿಳಿಸಿದ್ದ. ಆದರೆ ಅಂತಹಾ ಯಾವುದೇ ಘಟನೆಗಳು ನಡೆದಿಲ್ಲ ಎಂದು ತನಿಖೆಯಿಂದ ವ್ಯಕ್ತವಾಗಿದೆ. ಇನ್ನು ಮುಖ್ಯಮಂತ್ರಿಯ ರ್ಯಾಲಿಯ ಸಂದರ್ಭದಲ್ಲೂ ಆತ ಉಪಸ್ಥಿತನಿರಲಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News